ರಾಗಿಣಿ, ಸಂಜನಾ 14 ದಿನ ಬಂಧನ

September 15, 2020

ಬೆಂಗಳೂರು ಸೆ.14 : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಬ್ಬರು ನಟಿಯರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಬಂಧಿತ ನಟಿಯರಾದ ರಾಗಿಣಿ ಹಾಗೂ ಸಂಜನಾಗೆ ಸೆಪ್ಟೆಂಬರ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಸಿಸಿಬಿ ಪೊಲೀಸರು ಇಬ್ಬರು ನಟಿಯರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಇದರೊಂದಿಗೆ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ ಸ್ಯಾಂಡಲ್ ವುಡ್‍ನ ಮೊದಲ ನಟಿಯರು ಎಂಬ ಕುಖ್ಯಾತಿಗೆ ಸಂಜನಾ ಹಾಗೂ ರಾಗಿಣಿ ಪಾತ್ರರಾಗಿದ್ದಾರೆ.
ಈ ಮಧ್ಯೆ, ಜಾಮೀನು ಕೋರಿ ನಟಿ ರಾಗಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿಕೆಯಾಗಿದೆ. ಇದೇ ವೇಳೆ ಡ್ರಗ್ ಪೆಡ್ಲರ್ ರಾಹುಲು, ಶಿವಪ್ರಕಾಶ್, ವಿನಯ್ ಕುಮಾರ್, ವೈಭವ್ ಜೈನ್ ಅವರ ಜಾಮೀನು ವಿಚಾರಣೆಯನ್ನೂ ಮುಂದೂಡಲಾಗಿದೆ.

error: Content is protected !!