30 ಸಂಸದರಿಗೆ ಕೋವಿಡ್ ಪಾಸಿಟಿವ್

15/09/2020

ನವದೆಹಲಿ ಸೆ.15 : ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮುನ್ನಾ ದಿನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಸುಮಾರು 30 ಸಂಸದರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸೆಪ್ಟೆಂಬರ್ 13ರಂದು ಸಂಸದರಿಗೆ ಹಾಗೂ ಸಂಸತ್ ಭವನದ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 30 ಸಂಸದರಿಗೆ ಹಾಗೂ 50ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಬಿಜೆಪಿ 12 ಸಂಸದರು, ವೈಎಸ್‍ಆರ್ ಕಾಂಗ್ರೆಸ್ ನ 2, ಶಿವಸೇನೆ, ಡಿಎಂಕೆ ಮತ್ತು ಆರ್‍ಎಲ್ಪಿ ಪಕ್ಷದ ತಲಾ ಒಬ್ಬರು ಸೇರಿದಂತೆ ಒಟ್ಟು 30 ಸಂಸದರಿಗೆ ಕೊರೋನಾ ದೃಢಪಟ್ಟಿದೆ.
ಈ ಪೈಕಿ ಕೊರೋನಾಗೆ ತುತ್ತಾಗಿರುವ ಬಿಜೆಪಿಯ ಸಂಸದ ಸುಕಾಂತ್ ಮಜೂಂದಾರ್ ತಮಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮೀನಾಕ್ಷಿ ಲೇಕಿಗೂ ಕೊರೋನಾ ವಕ್ಕರಿಸಿದೆ.