ಕಾಯ್ದೆಗಳ ತಿದ್ದುಪಡಿಗೆ ವಿರೋಧ : ಹೋರಾಟ ಸಮಿತಿಯಿಂದ ಪ್ರತಿಭಟನೆ

September 15, 2020

ಮಡಿಕೇರಿ ಸೆ.15 : ರೈತ, ಕಾರ್ಮಿಕ, ದಲಿತ ವಿರೋಧಿ ಕಾಯ್ದೆಗಳ ಸುಗ್ರೀವಾಜ್ಞೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನಾ ಭಾಷಣ ಮಾಡಿದ ಸಮಿತಿಯ ಪ್ರಮುಖರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದರು.
ಕೇಂದ್ರ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ ಅವರು ಮಾತನಾಡಿ, ಸರ್ಕಾರ ಕೊರೋನಾ ವೈರಸ್ ನ್ನು ನೆಪವಾಗಿಟ್ಟುಕೊಂಡು ದುರಾಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.
ಭೂಮಿ, ವಸತಿ ಮತ್ತು ಕಡು ಬಡವರ ಸಮಸ್ಯೆಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು, ಕೋವಿಡ್ ಪರಿಸ್ಥಿತಿಯಿಂದ ತತ್ತರಿಸಿರುವ ರೈತ ಮತ್ತು ಕಾರ್ಮಿಕರ ನೆರವಿಗೆ ಸರ್ಕಾರ ಸಮಗ್ರ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಸೆ.21 ರಿಂದ 30ರ ವೆರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರೈತ, ದಲಿತ, ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಆರಂಭಗೊಂಡಿರುವ ಜಾಥಾ ಬೆಂಗಳೂರು ತಲುಪಲಿದೆ ಎಂದರು.
ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೆ ತಂದಿರುವುದಲ್ಲದೆ ಅನ್ನ ಕೊಡುವ ಭೂಮಿಯನ್ನು ಬಂಡವಾಳಶಾಹಿ ಕಂಪೆನಿಗಳಿಗೆ ಮಾರಾಟ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ಚಿಂತನೆಯನ್ನು ವಿರೋಧ ಪಕ್ಷದ ನಾಯಕರು ಸದನದಲ್ಲಿ ವಿರೋಧಿಸಬೇಕು, ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟವನ್ನು ನಡೆಸುವ ಮೂಲಕ ಸುಗ್ರೀವಾಜ್ಞೆಯನ್ನು ಕಾನೂನು ಬದ್ಧವಾಗಿ ತಡೆ ಹಿಡಿಯಬೇಕೆನ್ನುವ ಉದ್ದೇಶದಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಜನ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ನಿವೇಶನ ರಹಿತ ಕಡುಬಡವರ ಹಾಗೂ ಕಾರ್ಮಿಕರ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸಲು ಜಿಲ್ಲಾಡಳಿತಕ್ಕೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯರಾದ ಕುಮಾರ್ ಸಮತಾಳಿ, ಕಾವೇರಿ, ರೈತ ಸಂಘದ ಅಧ್ಯಕ್ಷ ಕಂದೆಗಾಲ್ ಶ್ರೀನಿವಾಸ್, ಕರ್ನಾಟಕ ವಿದ್ಯಾರ್ಥಿ ಸಂಘದ ಪ್ರಮುಖ ಮನೋಜ್, ನಗರಸಭೆಯ ಮಾಜಿ ಸದಸ್ಯ ಮನ್ಸೂರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.