2ನೇ ಮೊಣ್ಣಂಗೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಸಸಿ ನೆಡುವ ಯೋಜನೆಗೆ ಚಾಲನೆ

15/09/2020

ಮಡಿಕೇರಿ ಸೆ.15 : ಪ್ರಾಕೃತ್ತಿಕ ವಿಕೋಪದಿಂದಾಗಿ 2018ರಲ್ಲಿ ಹಾನಿಗೊಳಗಾಗಿದ್ದ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸಸಿ ನೆಡುವ ಯೋಜನೆಗೆ ಚಾಲನೆ ನೀಡಲಾಯಿತು.

ರೋಟರಿ ವಲಯ ಸಹಾಯಕ ಗವರ್ನರ್ ಪಿ.ಕೆ.ರವಿ ಮತ್ತು ಎರಡನೇ ಮೊಣ್ಣಂಗೇರಿ ಗ್ರಾಮ ಪಂಚಾಯತ್ ಸದಸ್ಯ ಧನಂಜಯ್ ಅಗೋಳಿಕಜೆ ಸಸಿ ನೆಡುವ ಮೂಲಕ ಕಾರ್ಯಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಪಿ.ಕೆ. ರವಿ, ರೋಟರಿಜಿಲ್ಲೆ 3181 ನಲ್ಲಿ ಈ ರೋಟರಿ ವರ್ಷದಲ್ಲಿ ಪ್ರತೀ ಕ್ಲಬ್ ನಿಂದಲೂ 6 ಸಾವಿರ ಸಸಿಗಳನ್ನು ನೆಡುವಯೋಜನೆ ಹಮ್ಮಿಕೊಳ್ಳಲಾಗಿದೆ. ರೋಟರಿ ಮಿಸ್ಟಿ ಹಿಲ್ಸ್ ಈ ಪೈಕಿ 4 ಸಾವಿರ ಸಸಿಗಳನ್ನು ಎರಡನೇ ಮೊಣ್ಣಂಗೇರಿ ಗ್ರಾಮಸ್ಥರಿಗೆ ನೀಡಿ ಮುಂದಿನ ದಿನಗಳಲ್ಲಿ ಭೂಕುಸಿತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿರುವುದು ಶ್ಲಾಘನೀಯ ಎಂದರು.

ಧನಂಜಯ ಅಗೋಳಿಕಜೆ ಮಾತನಾಡಿ, 2 ವರ್ಷಗಳಿಂದ ಮಹಾಮಳೆಯಿಂದಾಗಿ ಗ್ರಾಮದ ಜನತೆ ಸದಾ ಆತಂಕದಲ್ಲಿಯೇ ಮಳೆಗಾಲದಲ್ಲಿ ದಿನಕಳೆಯುವಂತಾಗಿದೆ. ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭೂಕುಸಿತ ಮುಂದೆ ಸಂಭವಿಸದಂತೆ ಎಲ್ಲಾ ರೀತಿಯ ವೈಜ್ಞಾನಿಕ ಕ್ರಮಗಳನ್ನೂ ಕೈಗೊಳ್ಳಬೇಕಾದ ಅಗತ್ಯವಿದೆ. ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾದ ಸಸಿಗಳನ್ನು ಗ್ರಾಮಸ್ಥರ ಸಹಕಾರದಿಂದ ಸೂಕ್ಷ್ಮ ಪ್ರದೇಶಗಳಲ್ಲಿ ನೆಡಲಾಗುತ್ತದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ.ಸಂದೀಪ್, ಕಾರ್ಯದರ್ಶಿ ಸತೀಶ್ ಸೋಮಣ್ಣ, ಯೋಜನಾ ನಿರ್ದೇಶಕ ಎಂ.ಪಿ. ನಾಗರಾಜ್, ಮಿಸ್ಟಿ ಹಿಲ್ಸ್ ನಿರ್ದೇಶಕರುಗಳಾದ ಬಿ.ಕೆ.ರವೀಂದ್ರ ರೈ, ಎಂ.ಧನಂಜಯ್, ಹರೀಶ್ ಕುಮಾರ್ ಪಾಲ್ಗೊಂಡಿದ್ದರು.