ತರಕಾರಿ ವಾಹನದಲ್ಲಿ ಬೀಟೆ ಸಾಗಾಟ : ಕುಟ್ಟದಲ್ಲಿ ಲಕ್ಷಾಂತರ ರೂ. ಮೌಲ್ಯದ ಮರ ವಶ

15/09/2020

ಮಡಿಕೇರಿ ಸೆ.15 : ತರಕಾರಿ ತುಂಬಿದ ವಾಹನದಲ್ಲಿ ಕೇರಳಕ್ಕೆ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪೊನ್ನಂಪೇಟೆ ವಲಯದ ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ. ವಾಹನ ಸಹಿತ ಲಕ್ಷಾಂತರ ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಟ್ಟ ಅರಣ್ಯ ತನಿಖಾ ಠಾಣೆಯ ಮುಂಭಾಗ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಬೀಟೆ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ತರಕಾರಿ ಚೀಲಗಳ ಅಡಿಯಲ್ಲಿ ಬೀಟೆ ಮರದ ತುಂಡುಗಳನ್ನು ತುಂಬಿ ಮಾನಂದವಾಡಿ ಮಾರ್ಗವಾಗಿ ಕೇರಳಕ್ಕೆ ಸಾಗಿಸಲು ಸಂಚು ರೂಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಪಿಕ್ ಅಪ್ ಬೊಲೆರೋ ವಾಹನವು ಹುಣಸೂರಿನಿಂದ ತರಕಾರಿ ತುಂಬಿಕೊಂಡು ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕುಟ್ಟ ಅರಣ್ಯ ಚೆಕ್‍ಪೆÇೀಸ್ಟ್ ತಲುಪಿತ್ತು. ಇದೇ ಸಂದರ್ಭ ರಾತ್ರಿ ಗಸ್ತಿನಲ್ಲಿದ್ದ ಉಪ ವಲಯಾರಣ್ಯಾಧಿಕಾರಿ ರವಿಕಿರಣ್ ಹಾಗೂ ತನಿಖಾ ಠಾಣೆ ಅರಣ್ಯ ವೀಕ್ಷಕ ವಿನೋದ್‍ಕುಮಾರ್ ವಾಹನ ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ.
ಹುಣಸೂರಿನಿಂದ ತರಕಾರಿ ತುಂಬಿಕೊಂಡು ಬಂದು, ಬಾಳೆಲೆ ಸಮೀಪ ದೇವನೂರು ಗ್ರಾಮದಲ್ಲಿ ಸ್ನೇಹಿತರಾದ ಬೇಬಿ ಹಾಗೂ ಅಜಾದ್ ಎಂಬವರ ಸಹಾಯದಿಂದ ಸುಮಾರು 21 ಬೀಟೆ ಸ್ಲ್ಯಾಬ್‍ಗಳನ್ನು ಪಿಕ್ ಅಪ್ ವಾಹನಕ್ಕೆ ತುಂಬಿಸಿಕೊಳ್ಳಲಾಗಿತ್ತು ಎಂದು ಬಂಧಿತ ವಾಹನ ಚಾಲಕ ಆರೋಪಿ ಅಸ್ಗರ್(40) ವಿಚಾರಣೆ ಸಂದರ್ಭ ಮಾಹಿತಿ ನೀಡಿದ್ದಾನೆ.
ಕಾರ್ಯಾಚರಣೆಯಲ್ಲಿ ಕುಟ್ಟ ಅರಣ್ಯ ಶಾಖೆ ಉಪ ವಲಯಾರಣ್ಯಾಧಿಕಾರಿ ಸಿ.ಡಿ.ಬೋಪಣ್ಣ, ಅರಣ್ಯ ರಕ್ಷಕರಾದ ರಾಜೇಶ್, ಸುಜಯ್ ಹಾಗೂ ಚೇತನ್ ಪಾಲ್ಗೊಂಡಿದ್ದರು. ಆರೋಪಿ ಅಸ್ಗರ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.