ಕೋವಿಡ್ ಸೋಂಕಿಗೆ ಎಮ್ಮೆಮಾಡು ನಿವಾಸಿ ಬಲಿ : ಕೊಡಗಿನಲ್ಲಿ ಮೃತಪಟ್ಟವರ ಸಂಖ್ಯೆ 28 ಕ್ಕೆ ಏರಿಕೆ

September 15, 2020

ಮಡಿಕೇರಿ ಸೆ.15 : ಮಡಿಕೇರಿ ತಾಲ್ಲೂಕು ಎಮ್ಮೆಮಾಡು ಗ್ರಾಮದ ನಿವಾಸಿ 50 ವರ್ಷದ ಪುರುಷರೊಬ್ಬರು ಇಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 28 ಕ್ಕೆ ಏರಿಕೆಯಾದಂತ್ತಾಗಿದೆ.
ಈ ಹಿಂದಿನಿಂದಲೂ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಅವರಿಗೆ ಪಾಶ್ರ್ವವಾಯು ಆಗಿತ್ತು. ಪಾಶ್ರ್ವವಾಯು ಕಾಯಿಲೆಗೆ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಸೆ.8ರಂದು ಕಫ ಸಮಸ್ಯೆಯಿಂದ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ (ಅಶ್ವಿನಿ ಆಸ್ಪತ್ರೆಗೆ) ಬಂದಿದ್ದರು. ಆಗ ಅವರಿಗೆ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ತಕ್ಷಣ ಅವರನ್ನು ಕೋವಿಡ್ ಆಸ್ಪತ್ರೆಯ ಐ.ಸಿ.ಯುಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.