ಮಡಿಕೇರಿಯಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ

15/09/2020

ಮಡಿಕೇರಿ ಸೆ.15 : ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹಕ್ಕೆ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಮಂಗಳವಾರ ಚಾಲನೆ ನೀಡಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಚಾಲನೆ ನೀಡಿ ಬಳಿಕ ಮಾತನಾಡಿದ ಜಿ.ಪಂ. ಅಧ್ಯಕ್ಷರು ಜಿಲ್ಲೆಯಲ್ಲಿ 1.20 ಲಕ್ಷದಷ್ಟು ಅನಕ್ಷರಸ್ಥರಿದ್ದು, ಅನಕ್ಷರಸ್ಥರಿಗೆ ಅಕ್ಷರ ಕಲಿಸುವಂತಾಗಬೇಕು ಎಂದು ಅವರು ಹೇಳಿದರು.
ಹಿಂದೆ ಸಾಕ್ಷರತಾ ಆಂದೋಲನ ಮಾದರಿಯಲ್ಲಿ ಅಕ್ಷರ ಕಲಿಸಲಾಗುತ್ತಿತ್ತು. ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದು ಬಿ.ಎ.ಹರೀಶ್ ಅವರು ತಿಳಿಸಿದರು.
ಅನಕ್ಷರಸ್ಥರನ್ನು ಹುಡುಕಿ ಅಕ್ಷರಸ್ಥರನ್ನಾಗಿ ಮಾಡುವ ಕೆಲಸವಾಗಬೇಕು. ಈ ಕಾರ್ಯಕ್ರಮದಲ್ಲಿ ಎಲ್ಲರೂ ಕೈಜೋಡಿಸಿಬೇಕಿದೆ ಎಂದು ಜಿ.ಪಂ.ಅಧ್ಯಕ್ಷರು ಮನವಿ ಮಾಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಮಾತನಾಡಿ ಉದ್ಯೋಗದ ಜೊತೆಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಶಿಕ್ಷಣ ಅತ್ಯವಶ್ಯ. ಆದ್ದರಿಂದ ಗ್ರಾ.ಪಂ.ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.
ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ ಅವರು ಮಾತನಾಡಿ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಇಲ್ಲದ ಬದುಕು ಊಹಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಅಕ್ಷರ ಜ್ಞಾನ ಇದ್ದಲ್ಲಿ ಬದುಕು ಉಜ್ವಲವಾಗಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಬಿ.ಬಿ.ಪುಷ್ಪಾವತಿ ಅವರು ಮಾತನಾಡಿ ಜಿಲ್ಲೆಯಲ್ಲಿ ಶೇ.20 ರಷ್ಟು ಅನಕ್ಷರಸ್ಥರು ಇದ್ದು, ಇವರಿಗೆ ಅಕ್ಷರ ಜ್ಞಾನ ನೀಡಬೇಕು. ವಲಸೆ ಕಾರ್ಮಿಕರು, ಮುಖ್ಯವಾಹಿನಿಯಿಂದ ದೂರ ಇರುವವರಿಗೆ ಶಿಕ್ಷಣ ನೀಡಬೇಕಿದೆ ಎಂದರು.
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅವರು ಮಾತನಾಡಿ ರಾಷ್ಟ್ರದ ಅಭಿವೃದ್ಧಿ ಶಿಕ್ಷಣವನ್ನು ಅವಲಂಭಿಸಿದೆ. ಆದ್ದರಿಂದ ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಬೇಕಿದೆ ಎಂದರು.
ಸಾಹು ಮಹಾರಾಜ, ಸಾವಿತ್ರಿ ಬಾಪುಲೆ ಅವರು 1800 ವರ್ಷದಲ್ಲಿಯೇ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಮಹಿಳೆಯರಿಗೆ ಶಾಲೆ ತೆರೆದಿದ್ದರು ಎಂದು ಅವರು ಸ್ಮರಿಸಿದರು.
ಇಂದಿಗೂ ಸಹ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಕ್ಷರತೆ ಪ್ರಮಾಣ ವ್ಯತ್ಯಾಸವಿದ್ದು, ಇದನ್ನು ಸರಿಪಡಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.
ಜಿ.ಪಂ.ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ ಅವರು ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮೋಹನ್ ಇತರರು ಇದ್ದರು. ಮೋಹನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.