ಕುಶಾಲನಗರ ಕಂಪ್ಯೂಟರ್ ಸೆಂಟರ್ ಸರ್ವರ್ ಹ್ಯಾಕ್ : ದೂರು ದಾಖಲು

15/09/2020

ಮಡಿಕೇರಿ ಸೆ.15 : ಕಂಪ್ಯೂಟರ್ ತರಬೇತಿ ಮತ್ತು ಸಾಫ್ಟ್‍ವೇರ್ ಪೂರೈಕೆದಾರ ಸಂಸ್ಥೆಯೊಂದರ ಕಂಪ್ಯೂಟರ್‍ನ ಸರ್ವರ್ ಅನ್ನು ಹ್ಯಾಕರ್‍ಗಳು ಹ್ಯಾಕ್ ಮಾಡುವ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಕೊಡಗು ಜಿಲ್ಲಾ ಸೈಬರ್ ಕ್ರೈಂ ವಿಭಾಗದಲ್ಲಿ ದಾಖಲಾಗಿದೆ.
ಮೂಲತಃ ಕುಶಾಲನಗರ ನಿವಾಸಿ ಕೊಡಗು ಜಿಲ್ಲಾ ಐಟಿ ಅಸೋಷಿಯೇಷನ್ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ಎಂಬವರು ನಡೆಸುತ್ತಿರುವ ಕಂಪ್ಯೂಟರ್ ಸಂಸ್ಥೆಯ ದಾಖಲೆಗಳನ್ನು ವೈರಸ್ ದಾಳಿ ನಡೆಸುವ ಮೂಲಕ ಹ್ಯಾಕರ್‍ಗಳು ಹ್ಯಾಕ್ ಮಾಡಿದ್ದು, ಭಾರತೀಯ ಕರೆನ್ಸಿಯ 80 ಸಾವಿರ ರೂ. ಹಣ ನೀಡಿದರೆ ಎಲ್ಲಾ ದಾಖಲೆಗಳನ್ನು ಯಥಾ ಸ್ಥಿತಿಯಲ್ಲಿ ಮತ್ತೆ ಮರಳಿಸುವುದಾಗಿ ಹ್ಯಾಕರ್‍ಗಳು ಹೇಳಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಪಿ. ಚಂದ್ರಶೇಖರ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆ.ಪಿ. ಚಂದ್ರಶೇಖರ್ ಅವರು ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್, ಸನ್ ಮೈಕ್ರೋಟೆಕ್ ಕಂಪ್ಯೂಟರ್ ಸರ್ವಿಸಸ್, ಸನ್ ಮೈಕ್ರೋಟೆಕ್ ಐಟಿ ಸಲ್ಯೂಶನ್ ಹಾಗೂ ಮೈಕ್ರೋಟೆಕ್ ಇನ್ ಫಾರ್‍ಮೇಶನ್ ಟೆಕ್ನಾಲಜಿಸ್ ಎಂಬ ಸಂಸ್ಥೆಗಳನ್ನು ನಡೆಸುತ್ತಿದಾರೆ. ಮಾತ್ರವಲ್ಲದೇ ರಾಜ್ಯದ ವಿವಿಧ ಶಾಲಾ ಕಾಲೇಜುಗಳಿಗೂ ಕಂಪ್ಯೂಟರ್ ಎಜುಕೇಶನ್‍ಗೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಹೊಂದಿದ್ದಾರೆ. ಕಳೆದ 5 ದಿನದ ಹಿಂದೆ ಕೆ.ಪಿ.ಚಂದ್ರಶೇಖರ್ ಅವರ ಒಡೆತನದ ಸಂಸ್ಥೆಯ ಸರ್ವರ್‍ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸರ್ವರ್‍ನಲ್ಲಿದ್ದ ಎಲ್ಲಾ ಡೇಟಾ(ದಾಖಲೆಗಳು)ಗಳು ಹಾನಿಗೀಡಾಗಿದ್ದವು.
ಬಳಿಕ ಪರಿಶೀಲನೆ ನಡೆಸಿದಾಗ “ರ್ಯಾಮ್‍ಸಮ್‍ವೇರ್ ಡಾಟ್ ಓಜಿಡಿಓ” ಎಂಬ ವೈರಸ್ ದಾಳಿ ಮಾಡಿರುವುದು ಕಂಡು ಬಂದಿದೆ. ಅಷ್ಟು ಮಾತ್ರವಲ್ಲದೇ ಮತ್ತೊಂದು ಫೋಲ್ಡರ್‍ನಲ್ಲಿ ಒಂದು ಪತ್ರವೂ ಕಂಡು ಬಂದಿತ್ತು. ಆ ಪತ್ರವನ್ನು ತೆರೆದ ಸಂದರ್ಭ “ನಿಮ್ಮ ಡೇಟಾವನ್ನು ಮತ್ತೆ ಮರಳಿ (ರಿಟ್ರೇವ್) ಪಡೆಯಬಹುದು. ಆ ಕೆಲಸಕ್ಕೆ ನೀವು 980 ಡಾಲರ್ ನೀಡಿ ನಮ್ಮ ಈ-ಮೇಲ್ ವಿಳಾಸದಲ್ಲಿ ವ್ಯವಹರಿಸ ಬೇಕು” ಎಂಬ ಸಂದೇಶವನ್ನೂ ನೀಡಲಾಗಿದೆ. ಇದರಿಂದ ಅಸಹಾಯಕರಾದ ಕೆ.ಪಿ. ಚಂದ್ರಶೇಖರ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮಗೆ ಈ-ಮೇಲ್ ಮಾಡಿದವರಿಂದಲೇ ಇಂತಹ ಕೃತ್ಯ ನಡೆದಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮೈಸೂರು ಮಿತ್ರನೊಂದಿಗೆ ಮಾತನಾಡಿದ ಕೆ.ಪಿ. ಚಂದ್ರಶೇಖರ್ ತಮ್ಮ ಸಂಸ್ಥೆಯ ಎಲ್ಲಾ ದಾಖಲೆಗಳು ಅತ್ಯಂತ ಸುರಕ್ಷಿತವಾಗಿದ್ದರೂ ಕೂಡ ಹ್ಯಾಕರ್‍ಗಳು ವೈರಸ್ ಮೂಲಕ ಸರ್ವರ್ ಅನ್ನು ಹ್ಯಾಕ್ ಮಾಡಿದ್ದಾರೆ. ಅವರು ಹೇಳಿದಂತೆ ಹಣ ನೀಡಿದರೂ ಮತ್ತೆ ಮರಳಿ ಡೇಟಾಗಳು ಲಭಿಸುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಅಳಲು ತೋಡಿಕೊಂಡರು.
ಆಧಾಯ ತೆರಿಗೆ, ಟ್ಯಾಲಿ ಸೇಲ್ಸ್ ಮತ್ತು ಖರೀದಿ, ಟ್ಯಾಕ್ಸ್ ವಿವರ, ಈ-ಮೇಲ್ ವ್ಯವಹಾರಗಳ ದಾಖಲಾತಿಗಳು ಹ್ಯಾಕ್ ಆಗಿರುವ ಹಿನ್ನಲೆಯಲ್ಲಿ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಸಾರ್ವಜನಿಕರು ತಮ್ಮ ಕಂಪ್ಯೂಟರ್‍ನಲ್ಲಿ ಅಮೂಲ್ಯ ದಾಖಲಾತಿಗಳನ್ನು ಶೇಖರಿಸಿಡುವ ಮುನ್ನ ಎಲ್ಲಾ ರೀತಿಯ ಎಚ್ಚರಿಕೆ ವಹಿಸಬೇಕು ಎಂದು ಚಂದ್ರಶೇಖರ್ ಹೇಳಿದರು. ವಿದೇಶಗಳಲ್ಲಿ ಕುಳಿತು ಹ್ಯಾಕ್ ಮಾಡುವ ಹ್ಯಾಕರ್‍ಗಳು ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅವರ ಮಾತಿಗೆ ಮರಳಾಗದಂತೆಯೂ ಚಂದ್ರಶೇಖರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.