ವೈದ್ಯರ ಮುಷ್ಕರ ಆರಂಭ

16/09/2020

ಬೆಂಗಳೂರು ಸೆ.16 : ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಆರೋಗ್ಯ ಇಲಾಖೆ ವೈದ್ಯರು ಇಂದಿನಿಂದ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಕೊರೋನಾ ಸೇರಿದಂತೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ಅಂಕಿ-ಅಂಶ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಅಸಹಕಾರ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಸೆ.20ರವರೆಗೆ ಕಾಲಾವಕಾಶ ನೀಡಿದ್ದು, ಸೂಕ್ತ ಭರವಸೆ ದೊರೆಯದಿದ್ದರೆ ಸೆ.21 ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆ (ಒಪಿಡಿ) ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಅಡಿಯಲ್ಲಿ 4,968 ವೈದ್ಯರ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‍ಎಸ್) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕೊರೋನಾ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಡದಿದ್ದರೂ ಪರಿಹಾರ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.