ವಿಷ್ಣು ಸ್ಮಾರಕ ಭವನಕ್ಕೆ ಭೂಮಿಪೂಜೆ

16/09/2020

ಬೆಂಗಳೂರು ಸೆ.16 : ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಆನ್ ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಡಾ.ವಿಷ್ಣುವರ್ಧನ ಅವರ 70ನೇ ವರ್ಷದ ಹುಟ್ಟುಹಬ್ಬದ, ವಿಶೇಷ ಸಂದರ್ಭದಲ್ಲಿ ದಿವಂಗತ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ. ವಿಷ್ಣುವರ್ಧನ್ ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಶ್ರೇಷ್ಠ ನಾಯಕ ನಟರು ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದು ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಬಣ್ಣಿಸಿದರು.
ತಮ್ಮ ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ” ಎಂದೇ ಪ್ರಖ್ಯಾತರಾದ ವಿಷ್ಣು ತಮ್ಮ ಶಿಸ್ತು, ಸಂಯಮಗಳಿಂದ ಎಲ್ಲರ ಪ್ರೀತಿಯನ್ನು ಗೆದ್ದಿದ್ದರು. ಕನ್ನಡ ಚಿತ್ರರಂಗಕ್ಕೆ ಡಾ.ರಾಜಕುಮಾರ್ ಅವರ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರಲ್ಲಿ ಡಾ.ವಿಷ್ಣುವರ್ಧನ್ ಸಹ ಸೇರಿದ್ದಾರೆ. ಸತತವಾಗಿ 38 ವರ್ಷಗಳ ಕಾಲ, ನೂರಾರು ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.