ಸೆ.19 ರಂದು ಮೆಗಾ ಇ-ಲೋಕ ಅದಾಲತ್ : ಅವಕಾಶ ಬಳಸಿಕೊಳ್ಳಲು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಮನವಿ

16/09/2020

ಮಡಿಕೇರಿ ಸೆ.16 : ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸೆಪ್ಟೆಂಬರ್, 19 ರಂದು ಮೆಗಾ ಇ-ಲೋಕ ಅದಾಲತ್ ಜರುಗಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶವಿದ್ದು, ಕಕ್ಷಿದಾರರು ಈ ಅವಕಾಶ ಬಳಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಅವರು ಕೋರಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‍ಲೈನ್, ವೀಡಿಯೋ ಕಾನ್ಫರೆನ್ಸ್, ಎಸ್‍ಎಂಎಸ್, ವಾಟ್ಸ್‍ಆಪ್, ಎಲೆಕ್ಟ್ರಿಕ್ ಮೋಡ್ ಮೂಲಕ ಸಂಪರ್ಕಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಸೇರಿ ಸುಮಾರು 16,200 ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದ್ದು, ಇದರಲ್ಲಿ 2,200 ರಷ್ಟು ರಾಜಿ ಅಥವಾ ಸಂದಾನದ ಮೂಲಕ ಬಗೆಹರಿಸಬಹುದಾದ ಪ್ರಕರಣಗಳಿವೆ ಎಂದು ನೂರುನ್ನೀಸ ಅವರು ಮಾಹಿತಿ ನೀಡಿದರು.
ರಾಷ್ಟ್ರೀಯ ಕಾನೂನು ಸೇವಾ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೆಗಾ ಇ-ಲೋಕ ಅದಾಲತ್ ಆಯೋಜಿಸಲಾಗಿದ್ದು, ರಾಜಿ ಅಥವಾ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಆದ್ದರಿಂದ ಸೆಪ್ಟೆಂಬರ್, 18 ರೊಳಗೆ ಇ-ಲೋಕ ಅದಾಲತ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಕೋವಿಡ್-19 ಹಿನ್ನೆಲೆ ಕಳೆದ ಕೆಲವು ತಿಂಗಳಿನಿಂದ ಲೋಕ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಸೆಪ್ಟೆಂಬರ್, 19 ರಂದು ದೇಶದಲ್ಲಿಯೇ ಪ್ರಥಮ ಬಾರಿಗೆ ಆನ್‍ಲೈನ್ ಮೂಲಕ ಪ್ರಕರಣಗಳನ್ನು ದಾಖಲಿಸಿಕೊಂಡು ಇತ್ಯರ್ಥಪಡಿಸಲು ಅವಕಾಶವಿದೆ. ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವ ಉದ್ದೇಶದಿಂದ ಇ-ಲೋಕ ಅದಾಲತ್ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಅವರು ಇದ್ದರು.

ಇನ್ನಷ್ಟು ಮಾಹಿತಿ; ವ್ಯಾಜ್ಯ ಪೂರ್ವ ಪ್ರಕರಣಗಳು: ಚೆಕ್ಕು ಅಮಾನ್ಯದ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ, ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು. ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಮೈನ್‍ಟೆನ್‍ನ್ಸ್ ಪ್ರಕರಣಗಳು, ಇತರ ಪ್ರಕರಣಗಳು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ) ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳು).
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು:-ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ, ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ/ ಕುಟುಂಬ ನ್ಯಾಯಾಲಯ ಪ್ರಕರಣಗಳು, ಭೂಸ್ವಾಧೀನ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು. ಕಂದಾಯ ಪ್ರಕರಣಗಳು(ಜಿಲ್ಲಾ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರ) ಹಾಗೂ ಸಿವಿಲ್ ಪ್ರಕರಣಗಳು (ಬಾಡಿಗೆ, ಅನುಭೋಗದ ಹಕ್ಕುಗಳು ನಿರ್ಬಂಧಾಜ್ಞೆ ಮೊಕದ್ದಮೆಗಳು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರ ಸಹಾಯವಾಣಿ ಸಂಖ್ಯೆ: 1800-425-90900 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಲಯದ ಆವರಣ ಮಡಿಕೇರಿ ದೂ.ಸಂ.08272-222373, ಇ-ಮೇಲ್ : dlsamadikeri@gmail.com ನ್ನು ಸಂಪರ್ಕಿಸಬಹುದಾಗಿದೆ.