ಓಡಿಪಿ ಮತ್ತು ಅಂದೇರಿ ಹಿಲ್ಸ್ ಸಂಸ್ಥೆಯಿಂದ ರೈತರಿಗೆ ರಸಗೊಬ್ಬರ ವಿತರಣೆ

ಮಡಿಕೇರಿ ಸೆ.16 : ಓಡಿಪಿ ಸಂಸ್ಥೆ ಮತ್ತು ಅಂದೇರಿ ಹಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ರಚನೆಗೊಂಡ ರೈತ ಉತ್ಪನ್ನ ಕೂಟದಲ್ಲಿ ನೋಂದಾಯಿತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ರಸಗೊಬ್ಬರ ವಿತರಣೆ ಕಾರ್ಯಕ್ರಮವು ಬುಧವಾರ ಸಂತ ಮೈಕಲರ ಶಾಲೆ ಆವರಣದಲ್ಲಿ ಓಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೆಯ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೆರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇವರು 38 ಸದಸ್ಯರಿಗೆ ರಸಗೊಬ್ಬರ ವಿತರಣೆ ಮಾಡಿ ಮಾತನಾಡಿ ಓಡಿಪಿ ಸಂಸ್ಥೆಯು ಕಳೆದ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರ ಮತ್ತು ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು 30 ರೈತೋತ್ಪನ್ನ ಕೂಟಗಳನ್ನು ರಚನೆ ಮಾಡಿ ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದ ಸುಮಾರು 6 ಸಾವಿರ ರೈತರಿಗೆ ದಾನಿಗಳ ಮೂಲಕ ಉಚಿತವಾಗಿ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಔಷಧಿಗಳನ್ನು ನೀಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಸ್ಥೆಯು ಸುಮಾರು 15 ರಿಂದ 20 ಸಾವಿರ ರೈತರನ್ನು ಒಟ್ಟುಗೂಡಿಸಿ ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಭಾನಾ ಎಂ.ಕೆ.ಅವರು ಕೃಷಿ ಇಲಾಖೆಯಿಂದ ದೊರಕುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಓಡಿಪಿ ಸಂಸ್ಥೆಯು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ದರ್ಶನ್ ಅವರು ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂತ ಮೈಕಲರ ದೇವಾಲಯದ ಧರ್ಮಗುರು ವಂದನೆಯ ಫಾದರ್ ದೀಪಕ್, ಸಂತ ಮೈಕಲರ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ನವಿನಾ, ಇತರರು ಇದ್ದರು.
ಕಾರ್ಯಕರ್ತರಾದ ವಿಜಯ ನಾರಾಯಣ ಅವರು ಸ್ವಾಗತಿಸಿದರು. ಯೋಜನೆ ಸಂಯೋಜಕರಾದ ಜಾನ್ ರೋಡ್ರಿಗಸ್ ಅವರು ನಿರೂಪಿಸಿದರು. ವಲಯ ಸಂಯೋಜಕರಾದ ಜಾಯ್ಸ್ ಮೆನೇಜಸ್ ಅವರು ವಂದಿಸಿದರು.


