ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಿಗ್ಗಾಲು ಗಿರೀಶ್ ಆಯ್ಕೆ

17/09/2020

ಮಡಿಕೇರಿ ಸೆ.17 : ಕೊಡಗಿನಲ್ಲಿ ತನ್ನ ಕಾರ್ಯಯೋಜನೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾಗಿ ವಾಯುಪಡೆಯ ಮಾಜಿ ಅಧಿಕಾರಿ, ಕವಿ ಹಾಗೂ ಲೇಖಕರಾದ ಕಿಗ್ಗಾಲು ಗಿರೀಶ್ ಆಯ್ಕೆಯಾಗಿದ್ದಾರೆ.
ನಗರದ ವೇದಾಂತ ಸಂಘದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಭಾರತೀಯ ವಿದ್ಯಾ ಭವನದ ಚಿತ್ರಕಲಾ ಶಿಕ್ಷಕ ಪ್ರಸನ್ನ ಕುಮಾರ್, ಜಿಲ್ಲಾ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ ಜಿ.ಪಂ ಮಾಜಿ ಸದಸ್ಯರಾದ ಬಬ್ಬಿರ ಸರಸ್ವತಿ ನೇಮಕಗೊಂಡಿದ್ದಾರೆ.
ಕೋಶಾಧಿಕಾರಿಯಾಗಿ ಕವಯಿತ್ರಿ ಹಾಗೂ ಅಂಕಣಕಾರರಾದ ಕಡ್ಲೆರ ಆಶಾ ಧರ್ಮಪಾಲ್, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಸಾಹಿತಿಗಳಾದ ಕಸ್ತೂರಿ ಗೋವಿಂದಮಯ್ಯ, ಸುಶೀಲ ಕುಶಾಲಪ್ಪ, ಜಾನಕಿ ಬೆಳ್ಳಿಯಪ್ಪ, ಮೊಣ್ಣಂಡ ಶೋಭಾ ಸುಬ್ಬಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಜಾನಕಿ ಮಾಚಯ್ಯ, ಅರೆಭಾಷಾ ಸಾಹಿತ್ಯ ಅಕಾಡೆಮಿ ಸದಸ್ಯರಾದ ಧನಂಜಯ ಅಗೊಳಿಕಜೆ, ಉಪನ್ಯಾಸಕರಾದ ಮಮತಾ ಪ್ರಸಾದ್, ಕಲಾವಿದೆ ಭಾರತಿ ರಮೇಶ್, ಸಾಮಾಜಿಕ ಕಾರ್ಯಕರ್ತರಾದ ಕೆ.ಕೆ.ದಿನೇಶ್ ಕುಮಾರ್ ಹಾಗೂ ಅಂಕಣಕಾರರಾದ ಕೋರನ ಸುನೀಲ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ನರೂರ್ ಘೋಷಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು 1966ರಲ್ಲಿ ರತ್ನಸಿಂಹ ಶಾಂಡಿಲ್ಯ ಅವರ ನೇತೃತ್ವದಲ್ಲಿ ದಿಲ್ಲಿ ಯಲ್ಲಿ ಉದ್ಘಾಟನೆಗೊಳ್ಳುವ ಮೂಲಕ ಆರಂಭವಾಯಿತು. 2015ರಿಂದ ಸಾಹಿತ್ಯಕ ದೃಷ್ಟಿಯಿಂದ ಕರ್ನಾಟಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳಲ್ಲಿ ಮುಖ್ಯವೆನಿಸಿದೆ. ಭಾಷೆ ನಾಗರಿಕತೆಯ ಪ್ರತೀಕವಾದರೆ ಸಾಹಿತ್ಯ ಸಂಸ್ಕøತಿಯ ಪ್ರತಿಬಿಂಬ. ಆತ್ಮಶೋಧನೆಯ ಮೂಲಕ ಸಾಧನೆಗೆ ದಾರಿದೀಪವೆನಿಸಿದ್ದು, ಸಾಹಿತ್ಯ. ಓದು ಮನುಷ್ಯನ ಒಳಗೊಬ್ಬ ಸಾಹಸಿಯನ್ನು ಸೃಷ್ಟಿಸುತ್ತದೆ. ಆ ಸಾಹಸದಿಂದ ಸಂಸ್ಕøತಿ ಮತ್ತು ತಾಯಿ ನೆಲದ ರಕ್ಷಣೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಅಭಾಸಪ ಸಂಘಟನೆಯದು.
ಹೀಗಾಗಿ ಎಲ್ಲ ಭಾರತೀಯ ಭಾಷೆಗಳ ಒಳಗಿರುವ ಭಾರತೀಯತೆಯನ್ನು ಜಾಗೃತಗೊಳಿಸುವ ಮೂಲಕ ಅವಾಸ್ತವಿಕ ವೈಚಾರಿಕತೆಯನ್ನು ಎದುರಿಸುತ್ತ ಅಖಂಡ ಭಾರತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತದೆ.
ಸಂಘಟನೆಯ ಕಾರ್ಯವ್ಯಾಪ್ತಿಯು ಘಟಕಗಳು ಹಾಗೂ ಸಮಿತಿಗಳೆಂಬ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುತ್ತಾ, ಸೃಜನಶೀಲತೆಯ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು, ಸಂವೇದನಾಶೀಲ ಸದೃಢ ಸಮಾಜವನ್ನು ಸೃಷ್ಟಿಸುವ ಗರಿಷ್ಟ 25 ಸದಸ್ಯರನ್ನು ಹೊಂದಿರುವ ಗುಂಪುಗಳು ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಸಾಹಿತ್ಯಕ ಅಪಸವ್ಯಗಳಿಂದ ಕೊಂಡಿಯಂತೆಯೂ, ಭಾರತದ ಭವಿಷ್ಯವೆನೆಸಿದ ಮುಂದಿನ ಪೀಳಿಗೆಯನ್ನು ಸಶಕ್ತ ಭಾರತ ನಿರ್ಮಾಣ ಕಾರ್ಯದಲ್ಲಿ ಸಿದ್ಧಗೊಳಿಸುವುದು ಸೇರಿದಂತೆ ಸಾಹಿತ್ಯದ ಹಲವಾರು ಕಾರ್ಯಕ್ರಮಗಳ ಆಯೋಜನೆಗಾಗಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಸಮಿತಿಗಳು ಆಯಾಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನೂತನ ಜಿಲ್ಲಾಧ್ಯಕ್ಷ ಕಿಗ್ಗಾಲು ಗಿರೀಶ್ ತಿಳಿಸಿದ್ದಾರೆ.