ಮಡಿಕೇರಿ ತಾ.ಪಂ ಸಾಮಾನ್ಯ ಸಭೆ : ಕೋವಿ, ಕೋವಿಡ್, ಕಾಡಾನೆ ಕುರಿತು ಚರ್ಚೆ

17/09/2020

ಮಡಿಕೇರಿ ಸೆ.17 : ಬಂದೂಕು ಪರವಾನಗಿ ಮತ್ತು ಪರವಾನಗಿ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕು ಪಂಚಾಯಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಬಂದೂಕು ಪರವಾನಗಿ ನವೀಕರಣಕ್ಕೆ ಹಲವಾರು ದಾಖಲಾತಿಗಳನ್ನು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸ್ ಇಲಾಖೆ, ಬಂದೂಕು ತರಬೇತಿ, ದೈಹಿಕ ಸಾಮಥ್ರ್ಯ, ವೈದ್ಯರ ದೃಢೀಕರಣ, ವೈದ್ಯಕೀಯ ಪ್ರಮಾಣ ಪತ್ರಗಳು ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಹಾಜರು ಪಡಿಸಬೇಕಿದೆ. ಹಾಗಾದರೇ ಇದಕ್ಕೂ ಮುನ್ನ ಯಾವುದೇ ದಾಖಲೆಗಳನ್ನು ಪಡೆಯದೇ ಬಂದೂಕು ನೀಡಲಾಗಿತ್ತೇ ಎಂದು ಪ್ರಶ್ನಿಸಿದರು. ಕೇವಲ ಸಂಪಾಜೆ, ಚೆಂಬು, ಕರಿಕೆ ಭಾಗಗಳ ರೈತರಿಗೆ ಬಂದೂಕು ಪರವಾನಗಿ ನವೀಕರಣ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ವಿಲೇವಾರಿಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು. ಇದು ಅಸಾಧ್ಯ ಎನ್ನುವುದಾದರೇ ನಮ್ಮ ಬಂದೂಕನ್ನು ಜಿಲ್ಲಾಡಳಿತಕ್ಕೆ ಹಿಂದಿರುಗಿಸುತ್ತೇವೆ. ಅದಕ್ಕಾಗಿ ಯಾವುದಾದರೂ ಅವಕಾಶಗಳಿದ್ದರೆ ಅದನ್ನಾದರೂ ಹೇಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮತ್ತೋರ್ವ ಸದಸ್ಯ ಅಪ್ಪು ರವೀಂದ್ರ, ನನ್ನ ಸ್ವರಕ್ಷಣೆಯ ಬಂದೂಕಿಗೆ ರಾಜ್ಯದ ಪರಿಮಿತಿ ಇದೆ. ಆದರೆ ಪರವಾನಗಿ ನವೀಕರಣಕ್ಕೆ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ 8 ತಿಂಗಳು ಕಳೆದಿದ್ದರೂ ಇಂದಿಗೂ ನವೀಕರಣವಾಗಿಲ್ಲ. ಹೀಗಾದರೇ ಜೊತೆಯಲ್ಲಿ ಬಂದೂಕು ಇಟ್ಟುಕೊಳ್ಳುವುದಾರರೂ ಹೇಗೆ ಎಂದು ಪ್ರಶ್ನಿಸಿದರು. ಈ ಸಮಸ್ಯೆಯನ್ನು ಮೊದಲು ಬಗೆ ಹರಿಸಬೇಕು ಮತ್ತು ತಕ್ಷಣವೇ ನವೀಕರಣ ಮಾಡಬೇಕೆಂದು ಸದಸ್ಯರು ಒಮ್ಮತದಿಂದ ಆಗ್ರಹಿಸಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ತಹಶೀಲ್ದಾರ್ ಮಹೇಶ್, ಬಂದೂಕು ಪರವಾನಗಿ ಮತ್ತು ನವೀಕರಣ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದಾಗಿದೆ. ತಾಲೂಕು ದಂಡಾಧಿಕಾರಿಗಳಿಗೆ ಇದೀಗ ಆ ಅಧಿಕಾರವಿಲ್ಲ ಎಂದು ಸಮಜಾಯಿಷಿಕೆ ನೀಡಿದರು. ಈಗಾಗಲೇ ಉಸ್ತುವಾರಿ ಸಚಿವರು ಕೂಡ ಅಪರ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು. ಶಿರಸ್ತೇದಾರ್ ಪ್ರವೀಣ್, 2016ರ ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯಲ್ಲಿ ಮಾಡಲಾಗಿರುವ ಬದಲಾವಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿರುವ ಬಗ್ಗೆ ಸಭೆಗೆ ವಿವರ ನೀಡಿದರು. ನವೀಕರಣಕ್ಕೂ ದಾಖಲಾತಿಗಳನ್ನು ಹಾಜರುಪಡಿಸಬೇಕೆಂದು ಕೇಂದ್ರ ಗೃಹ ಇಲಾಖೆಯೇ ಆದೇಶ ನೀಡಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಡಿಕೇರಿ ತಾಲೂಕಿನಾದ್ಯಂತ ಕಾಡಾನೆ ಸಮಸ್ಯೆ ಇದೆ. ಆದರೆ ಸಭೆಗೆ ಮಾತ್ರ ಅರಣ್ಯ ಅಧಿಕಾರಿಗಳು ಭಾಗವಹಿಸಿಲ್ಲ ಎಂದು ಸದಸ್ಯ ಅಪ್ಪು ರವೀಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರಪೇಟೆ ಕಡೆಯಿಂದ ಅಭ್ಯತ್‍ಮಂಗಲದ ಕಡೆಗೆ ಕಾಡಾನೆಗಳನ್ನು ಓಡಿಸಲಾಗುತ್ತಿದೆ. ಬಳಿಕ ಆನೆಗಳನ್ನು ಕಾಡಿಗಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ಅರೆಕಾಡು ವ್ಯಾಪ್ತಿಯಲ್ಲಿ 13 ಆನೆಗಳ ಹಿಂಡು ತಿರುಗಾಡುತ್ತಿವೆ. ಇಂದು ಬೆಳಿಗೆ ಸಭೆಗೆ ಬರುವ ಸಂದರ್ಭ ರಸ್ತೆಯಲ್ಲಿಯೇ ಕಾಡಾನೆ ಎದುರಾಯಿತು. ಜೀವ ಉಳಿದದ್ದೇ ದೊಡ್ಡದು. ಕಾಡಾನೆ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದು ಅಪ್ಪು ರವೀಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಅರೆಕಾಡು ಬಳಿ ಕಾಡಾನೆಗಳ ಹಿಂಡು ವಾಹನಕ್ಕೆ ಎದುರಾಯಿತು. ರಸ್ತೆಯ 2 ಬದಿಗಳಲ್ಲಿ ಸೋಲಾರ್ ಬೇಲಿ ಇದ್ದ ಹಿನ್ನಲೆಯಲ್ಲಿ ಕಾಡಾನೆಗಳು ರಸ್ತೆಯಲ್ಲಿ ನಡೆದು ಬರುತ್ತಿದ್ದ ಸಂದರ್ಭ 4 ಕಿ.ಮೀ. ಉದ್ದಕ್ಕೂ ವಾಹನವನ್ನು ರಿವರ್ಸ್ ಓಡಿಸಿಕೊಂಡು ಹೋಗ ಬೇಕಾಯಿತು ಎಂದು ಸದಸ್ಯ ಅಪ್ಪು ರವೀಂದ್ರ ಕಾಡಾನೆ ಹಾವಳಿ ಬಗ್ಗೆ ಸಭೆಯ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಇಓ ಲಕ್ಷ್ಮಿ, ಕಾಡಾನೆ ಸಮಸ್ಯೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮೀಣ ಭಾಗ ಪೆರಾಜೆಗೆ ಸ್ಮಶಾನಕ್ಕಾಗಿ ಜಾಗ ಮೀಸಲಿಡುವಂತೆ ಹಲವು ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಆಕ್ಷೇಪ ವ್ಯಕ್ತಪಡಿಸಿದರು. ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯನ್ನು ಪೆರಾಜೆಯಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು. ಆ ಗ್ರಾಮದಲ್ಲಿ ಮತ್ತೆ ಯಾವುದೇ ಸಾವು ಪ್ರಕರಣ ನಡೆದಿಲ್ಲ, ಆದರೆ ಬಡ ವರ್ಗದ ಜನರು ನೆಲೆಸಿರುವ ಗ್ರಾಮಕ್ಕೆ ಸ್ಮಶಾನ ಜಾಗ ಮೀಸಲಿಡದಿರುವುದು ತೀರಾ ವಿಪರ್ಯಾಸ ಎಂದು ಅಸಮಾಧಾನ ಹೊರಗೆಡವಿದರು. ಸದಸ್ಯ ಅಪ್ಪು ರವೀಂದ್ರ ಮಾತನಾಡಿ ಅರೆಕಾಡಿನಲ್ಲಿಯೂ 13 ಎಕರೆ ಪೈಸಾರಿ ಜಾಗವಿದೆ. ಆ ಸ್ಥಳದಲ್ಲಿ 50 ಸೆಂಟ್ ಪ್ರದೇಶವನ್ನು ಸ್ಮಶಾನಕ್ಕಾಗಿ ಮೀಸಲಿಡುವಂತೆ ಆಗ್ರಹಿಸಿದರು. ಗ್ರಾಮದಲ್ಲಿ ಯಾವುದಾದರೂ ಸಾವು ಸಂಭವಿಸಿದರೆ ಮೃತದೇಹವನ್ನು ಗ್ರಾಮ ಪಂಚಾಯಿತಿ ಮುಂದೆ ಇಟ್ಟು ಪ್ರತಿಭಟಿಸುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್, ಪೆರಾಜೆಯಲ್ಲಿ 138 ಸರ್ವೆ ನಂಬರ್‍ನಲ್ಲಿ ಪೈಸಾರಿ ಸ್ಥಳವಿದೆ. ಆ ಸ್ಥಳವನ್ನು ಸರ್ವೆ ಮಾಡಿ ಸ್ಮಶಾನಕ್ಕೆ ಮೀಸಲಿಡಲಾಗುತ್ತಿದೆ. 15 ದಿನಗಳ ಒಳಗೆ ಇದನ್ನು ಇತ್ಯರ್ಥಪಡಿಸುವುದಾಗಿ ತಹಶೀಲ್ದಾರ್ ಮಹೇಶ್ ಹೇಳಿದರು. ಅರೆಕಾಡಿನಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆ ಜಮೀನಿನಲ್ಲಿ ಸ್ಮಶಾನಕ್ಕೆ ಸ್ಥಳ ಮೀಸಲಿಡುವ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ, ಕೃಷಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಮತ್ತಿತ್ತರ ಇಲಾಖಾ ಅಧಿಕಾರಿಗಳು ಹಾಜರಿದ್ದು ಇಲಾಖೆಗಳ ಮಾಹಿತಿ ನೀಡಿದರು. ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿಯ ಶ್ರೀಧರ್, ಸದಸ್ಯರಾದ ಉಮಾ ಪ್ರಭು, ಕುಮುದ, ಶಶಿ, ರಾಯ್ ತಮ್ಮಯ್ಯ ಮತ್ತಿತ್ತರರು ಉಪಸ್ಥಿತರಿದ್ದರು.