ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಭೇಟಿ : ಪರಿಶೀಲನೆ

17/09/2020

ಪೊನ್ನಂಪೇಟೆ, ಸೆ.17: ಗೋಣಿಕೊಪ್ಪಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸರಕಾರಿ ಆಸ್ಪತ್ರೆ) ಹಿರಿಯ ವಕೀಲರು ಮತ್ತು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್. ಪೊನ್ನಣ್ಣ ಅವರು ಭೇಟಿ ನೀಡಿದ್ದರು. ಈ ವೇಳೆ ಎ.ಕೆ. ಸುಬ್ಬಯ್ಯ- ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಶಾಶ್ವತ ಯೋಜನೆಗಾಗಿ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಈ ಬಗ್ಗೆ ಮಾತನಾಡಿದ ಎ.ಎಸ್. ಪೊನ್ನಣ್ಣ ಅವರು, ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನರು ಆರೋಗ್ಯ ಸೇವೆಗಾಗಿ ಆಗಮಿಸುತ್ತಿದ್ದಾರೆ. ಈ ಪೈಕಿ ಬಹುತೇಕ ಮಂದಿ ಬಡವರಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳ ಕೊರತೆಯಿಂದ ಅವರಿಗೆ ಪೂರ್ಣಪ್ರಮಾಣದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪೋಷಕರ ಸ್ಮರಣಾರ್ಥವಾಗಿ ರಚಿಸಲಾಗಿರುವ ಟ್ರಸ್ಟ್ ವತಿಯಿಂದ ಶಾಶ್ವತ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಇದೀಗ ಸ್ಥಳ ಪರಿಶೀಲನೆ ನಡೆಸಿದ್ದು, ಟ್ರಸ್ಟಿನ ಸಭೆಯಲ್ಲಿ ಸಹೋದರರೊಂದಿಗೆ ಈ ಕುರಿತು ಚರ್ಚಿಸಿ ಅನುಷ್ಠಾನಗೊಳಿಸಬೇಕಾದ ಶಾಶ್ವತ ಯೋಜನೆಯೊಂದರ ಕುರಿತು ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ತಮ್ಮ ದಿವಂಗತ ತಂದೆ ಎ.ಕೆ. ಸುಬ್ಬಯ್ಯ ಅವರ ಪ್ರಥಮ ವರ್ಷದ ಪುಣ್ಯಸ್ಮರಣ ದಿನದಂದು ಗೋಣಿಕೊಪ್ಪಲು ಭಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶಾಶ್ವತ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಈ ಹಿಂದೆಯೇ ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ ಭೀತಿಯ ನಿರ್ಬಂಧ ಜಾರಿಯಲ್ಲಿದ್ದ ಕಾರಣ ಉದ್ದೇಶಿತ ಸಮಯದಲ್ಲಿ ಇದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಮುಂದೆ ಈ ಕುರಿತು ಗಮನಹರಿಸಿ ಉದ್ದೇಶಿತ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಎ.ಎಸ್. ಪೊನ್ನಣ್ಣ ಅವರ ಭೇಟಿ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಸುರೇಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೀದೇರಿರ ನವೀನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಡಿಸಿಸಿ ಸದಸ್ಯರು ಮತ್ತು ಟಿ. ಶೆಟ್ಟಿಗೇರಿ ಗ್ರಾ.ಪಂ. ಮಾಜಿ ಸದಸ್ಯರಾದ ಮುಕ್ಕಾಟಿರ ಯು.ಸಂದೀಪ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಕಾಂಗ್ರೆಸ್ ಪ್ರಮುಖರಾದ ಎ.ಎಸ್. ನರೇನ್ ಕಾರ್ಯಪ್ಪ, ಶಾಜಿ ಅಚ್ಚುತ್ತನ್ ಮೊದಲಾದವರು ಹಾಜರಿದ್ದರು.