ಸಾಧಕ ವಿದ್ಯಾರ್ಥಿ ಹೆಚ್.ಸಿ.ಗೀತಾ ಗೆ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆರ್ಥಿಕ ನೆರವು

17/09/2020

ಮಡಿಕೇರಿ ಸೆ.17 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದ ಸಂಪಾಜೆ ಗ್ರಾಮದ ವಿದ್ಯಾರ್ಥಿನಿ ಹೆಚ್.ಸಿ.ಗೀತಾ ಅವರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಪಿಯು ಪರೀಕ್ಷೆಯಲ್ಲಿ 600 ಅಂಕಗಳಿಗೆ 558 ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದ ಗೀತಾ ಮನೆಗೆ ತೆರಳಿದ ಮಿಸ್ಟಿ ಹಿಲ್ಸ್‍ತಂಡವು ಸಹಾಯಕ ಗವರ್ನರ್ ಪಿ.ಕೆ.ರವಿ ಮೂಲಕ 10 ಸಾವಿರರು. ಗಳ ಆರ್ಥಿಕ ನೆರವು ನೀಡಿತು.
ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತಾಯಿ ಜಾನಕಿಯ ಆಸರೆಯಲ್ಲಿ ಬೆಳೆದ ಗೀತಾಳ ಮನೆಯಲ್ಲಿ ಸಹೋದರಿ ಅಂಜಲಿ, ಅಜ್ಜಿ ಸುಶೀಲಾ ಕಿರಿದಾದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಹೋದರಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಕೂಲಿಕೆಲಸಕ್ಕೆ ತೆರಳಿದರೆ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ.

ಹೀಗಿದ್ದರೂ ಗೀತಾಳಿಗೆ ಓದಬೇಕೆಂಬ ಹಂಬಲ ಇದ್ದುದ್ದರಿಂದಾಗಿ ಬಡತನದ ನಡುವೆ ಉತ್ತಮ ಅಂಕಗಳಿಸಿ ಸಾಧನೆ ತೋರಿದಳು.

ಗೀತಾ ಸಾಧನೆ ಪರಿಗಣಿಸಿದ ರೋಟರಿ ಮಿಸ್ಟಿ ಹಿಲ್ಸ್ ಈಕೆಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ.ಸಂದೀಪ್ ತಿಳಿಸಿದ್ದಾರೆ.

ಮಿಸ್ಟಿ ಹಿಲ್ಸ್ ನೆರವನ್ನು ವಿದ್ಯಾರ್ಥಿನಿ ಗೀತಾ ಭಾವನಾತ್ಮಕವಾಗಿ ಸ್ಮರಿಸಿದ್ದು ಮುಂದಿನ ಶೈಕ್ಷಣಿಕ ಹಂತಕ್ಕೆ ಇಂಥ ಪ್ರೋತ್ಸಾಹ ನೆರವಾಗುತ್ತದೆ ಎಂದರು.

ಮಿಸ್ಟಿ ಹಿಲ್ಸ್ ಈ ನೆರವಿನ ಯೋಜನೆಗೆ ಸಹಾಯಕ ಗವರ್ನರ್ ಪಿ.ಕೆ.ರವಿ ಮೆಚ್ಚುಗೆ ಸೂಚಿಸಿದರು. ಈ ಸಂದರ್ಭ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಸತೀಶ್ ಸೋಮಣ್ಣ, ಯೋಜನಾ ನಿರ್ದೇಶಕ ಎಂ.ಧನಂಜಯ್, ನಿರ್ದೇಶಕರಾದ ಬಿ.ಕೆ.ರವೀಂದ್ರರೈ, ಹರೀಶ್‍ಕುಮಾರ್ ಹಾಜರಿದ್ದರು.