ಅಸಭ್ಯ ಸಂದೇಶ ಪ್ರಕರಣ : ಮಡಿಕೇರಿಯಲ್ಲಿ ಕಾನೂನು ಕೈಗೆತ್ತಿಕೊಂಡವರು ಸೇರಿ ಐವರ ಬಂಧನ

September 17, 2020

ಮಡಿಕೇರಿ ಸೆ.17 : ಮಹಿಳೆಯೊಬ್ಬರಿಗೆ ಅಸಭ್ಯ ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದ ಆರೋಪದಡಿ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬನಿಗೆ ಧರ್ಮದೇಟು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಹಮ್ಮದ್ ಮುದಾಸೀರ್ ಎಂಬ ಯುವಕ ನಗರದ ಬ್ಯೂಟಿ ಪಾರ್ಲರ್ ಒಂದರ ಮಹಿಳೆಯೊಬ್ಬರಿಗೆ ಅಸಭ್ಯ ರೀತಿಯ ಮೆಸೇಜ್‍ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಮಹಿಳೆ ತನ್ನ ಸಂಬಂಧಿಕರಾದ ಉಮೇಶ್ ಎಂಬವರಿಗೆ ಈ ವಿಷಯ ತಿಳಿಸಿದ್ದಾರೆ. ಅದರಂತೆ ಆತನನ್ನು ನಗರದ ಹಳೇ ಆರ್‍ಟಿಓ ಕಚೇರಿ ಬಳಿ ಬರ ಹೇಳಿ ಮಹಿಳೆ ಸೇರಿದಂತೆ ಇತರ ಮೂವರು ಮಹಮ್ಮದ್ ಮುದಾಸಿರ್ ನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.
ಮಹಮ್ಮದ್ ಮುದಾಸೀರ್ ನಗರ ಪೊಲೀಸರಿಗೆ ಪ್ರತಿದೂರು ನೀಡಿ ಮಹಿಳೆ ಸೇರಿದಂತೆ ಮೂವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ಮಾತ್ರವಲ್ಲದೇ ಹಲ್ಲೆಯ ದೃಶ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ತಾಲತಾಣದಲ್ಲಿ ಪ್ರಸಾರ ಮಾಡಿರುವುದಾಗಿ ತಿಳಿಸಿದ್ದ.
ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡ ನಗರ ಪೊಲೀಸರು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಈ ಪ್ರಕರಣವನ್ನು ಹಸ್ತಾಂತರಿಸಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ನಿರ್ದೇಶನದಂತೆ ಮಹಿಳೆಯನ್ನು ಚುಡಾಯಿಸಿದ ಮಹಮ್ಮದ್ ಮುದಾಸೀರ್, ಪೊಲೀಸರಿಗೆ ಮಾಹಿತಿ ನೀಡದೆ ಕಾನೂನನ್ನು ಕೈಗೆತ್ತಿಕೊಂಡಿರುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ ಆರೋಪದಡಿ ಶ್ರೀನಿವಾಸ್, ಉಮೇಶ್, ಸತ್ಯ ಹಾಗೂ ಮಹಿಳೆಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.