ಕಸಾಪ ದಿಂದ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

18/09/2020

ಮಡಿಕೇರಿ ಸೆ.18 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ದಿ.ರಾಮಕೃಷ್ಣ ದತ್ತಿ ಕಾರ್ಯಕ್ರಮ ಹಾಗೂ ಕಳೆದ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಸೋಮೇಶ್ವರ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್ ಉದ್ಘಾಟಿಸಿದರು. ಮಾತನಾಡಿದ ಅವರು, ಗಡಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಕನ್ನಡದ ಅಸ್ಮಿತೆ ಉಳಿಯಬೇಕಾದರೆ ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಕನ್ನಡದ ಮೇಲಿನ ಆಸಕ್ತಿಯನ್ನು ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೊಡಗು ಕಸಾಪ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಕಳೆದ ಐದು ವರ್ಷಗಳಿಂದ ಕನ್ನಡದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುತ್ತಾ ಬಂದಿದೆ ಎಂದರು.
ಶಿಕ್ಷಕ ಉ.ರಾ.ನಾಗೇಶ್ ಮಾತನಾಡಿ, ದಿ.ರಾಮಕೃಷ್ಣ ಅವರು ಕಸಾಪದಲ್ಲಿ ಸ್ಥಾಪಿಸಿರುವ ದತ್ತಿ ಉಪನ್ಯಾಸ ನೀಡುತ್ತಾ ರಾಮಕೃಷ್ಣರ ಕೃತಿಗಳು ಮತ್ತು ಅವರ ಆದರ್ಶಗಳ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ 24 ವಿದ್ಯಾರ್ಥಿಗಳು ಹಾಗೂ ಕುಶಾಲನಗರ ಫಾತಿಮ ಪ್ರೌಡ ಶಾಲೆಯ ನಿವೃತ್ತ ಶಿಕ್ಷಕ ಬಾಲಕೃಷ್ಣ, ಕುಶಾಲನಗರ ಸರಕಾರಿ ಶಾಲೆಯ ನಿವೃತ್ತ ಶಿಕ್ಷಕ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕುಶಾಲನಗರ ತಾಲೂಕ ಕಸಾಪ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಿಕೋ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಹೆಚ್.ಎನ್.ಸುಬ್ರಹ್ಮಣ್ಯ, ಶಿಕ್ಷಕಿ ಮಾಲಾದೇವಿ, ಕಸಾಪ ಕಾರ್ಯದರ್ಶಿ ಎನ್.ಆರ್.ನಾಗೇಶ್, ಹರೀಶ್, ಕೋಶಾಧ್ಯಕ್ಷ ನಾಗೇಗೌಡ, ಪದಾಧಿಕಾರಿಗಳಾದ ಹೆಚ್.ಎನ್.ರಾಮಚಂದ್ರ, ಹೆಚ್.ಎಂ.ವೆಂಕಟೇಶ್ ಹಾಜರಿದ್ದರು.