ವಸತಿ ಯೋಜನೆ ಅನುಷ್ಠಾನಕ್ಕೆ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯ : ಮಡಿಕೇರಿಯಲ್ಲಿ ಪ್ರತಿಭಟನೆ

September 18, 2020

ಮಡಿಕೇರಿ ಸೆ.18 : ಜಿಲ್ಲೆಯ ವಸತಿ ರಹಿತ ಕಡು ಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ವಸತಿ ಯೋಜನೆಯ ಮೂಲಕ ಮನೆಗಳನ್ನು ನೀಡಬೇಕು, ನಿವೇಶನದ ಹಕ್ಕುಪತ್ರ ಹಂಚಿಕೆ ಮಾಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ವೇದಿಕೆಯ ಪ್ರಮುಖರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಕೆ.ಮುತ್ತಪ್ಪ ಅವರು, ಜಿಲ್ಲೆಯ ವಿವಿಧೆಡೆ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ದುಡಿಯುತ್ತಿರುವ ವಸತಿ ರಹಿತರು ಕೋವಿಡ್ ಸಂಕಷ್ಟದ ಪರಿಸ್ಥಿತಿಯ ಕಾರಣದಿಂದ ಕೂಲಿ ಇಲ್ಲದೆ, ಬಾಡಿಗೆ ಕಟ್ಟಲು ಸಾಧ್ಯವಾಗದೆ ಪರದಾಡುವಂತಾಗಿದೆ. ಇವರುಗಳಿಗೆ ಶೀಘ್ರ ಸ್ವಂತ ಮನೆಗಳನ್ನು ನಿರ್ಮಿಸಿಕೊಡಬೇಕು, ಅಕ್ರಮ ಸಕ್ರಮ ಸಮಿತಿಗಳನ್ನು ಸಮರ್ಪಕವಾಗಿ ರಚಿಸಬೇಕು ಮತ್ತು ಫಲಾನುಭವಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
::: ಬೇಡಿಕೆಗಳು :::
ವಿರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳನ್ನು ಕಾಡುತ್ತಿರುವ ಸ್ಮಶಾನದ ಕೊರತೆಯ ಸಮಸ್ಯೆಯನ್ನು ಬಗೆಹರಿಸಬೇಕು, ಶುದ್ಧ ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು, ನಿವೇಶನದ ಹಕ್ಕು ಪತ್ರವನ್ನು ಯಾವುದೇ ತಕರಾರು ಇಲ್ಲದೆÉ ಹಂಚಿಕೆ ಮಾಡಬೇಕು.
ವೃದ್ಧಾಪ್ಯ ವೇತನ, ವಿಧವಾವೇತನ ಮತ್ತು ಪಿಂಚಣಿಯನ್ನು ಸಕಾಲದಲ್ಲಿ ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮನೆ, ಗದ್ದೆಗಳಿಗೆ ತೆರಳಲು ರಸ್ತೆ ವ್ಯವಸ್ಥೆಯನ್ನು ಕಲ್ಪಿಸಬೇಕು, ಸರ್ಕಾರ ವಶಪಡಿಸಿಕೊಂಡಿರುವ ಒತ್ತುವರಿ ಜಾಗವನ್ನು ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು ಎಂದು ಮುತ್ತಪ್ಪ ಒತ್ತಾಯಿಸಿದರು. ನೆರೆ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡುವ ಸಂದರ್ಭ ಲೋಪವಾಗಿದೆ ಎಂದು ಆರೋಪಿಸಿದ ಅವರು, ಸೂಕ್ತ ತನಿಖೆ ನಡೆಸಬೇಕೆಂದರು.
ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಜಯಂತಿ, ಬೋಜಪ್ಪ, ಗಣೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಶಾರದ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ದೇವಯ್ಯ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷೆ ಶೋಭ, ಕಾರ್ಯದರ್ಶಿ ಪುಟ್ಟಸ್ವಾಮಿ ಮತ್ತಿತರ ಪದಾಧಿಕಾರಿಗಳು ಹಾಜರಿದ್ದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

error: Content is protected !!