ಶಾಸಕ ಅಪ್ಪಚ್ಚು ರಂಜನ್ ರಿಂದ ಚೆಟ್ಟಳ್ಳಿ-ಅಭ್ಯಾಲ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

18/09/2020

ಮಡಿಕೇರಿ ಸೆ.18 : ಚೆಟ್ಟಳ್ಳಿ-ಅಭ್ಯಾಲ ಮಾರ್ಗ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು.
ಸರಳ ಕಾರ್ಯಕ್ರಮದಲ್ಲಿ 2.25 ಕಿ.ಮೀ. ದೂರಕ್ಕೆ ನಿರ್ಮಾಣಗೊಂಡ 5 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಅಪ್ಪಚ್ಚು ರಂಜನ್, ಚೆಟ್ಟಳ್ಳಿ ನಾಗರಿಕರ ಬಹುದಿನದ ಬೇಡಿಕೆಯಾಗಿರುವ ಕಾಂಕ್ರೀಟ್ ರಸ್ತೆಯನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಮಳೆಯಿಂದಾಗಿ ಕ್ಷೇತ್ರದ ಅನೇಕ ರಸ್ತೆಗಳು ಹದಗೆಟ್ಟಿದ್ದು ಇವುಗಳ ದುರಸ್ತಿಗೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಅನುದಾನ ದೊರಕಿಸಿ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದರು.
ಚೆಟ್ಟಳ್ಳಿ ವ್ಯಾಪ್ತಿಯ ಜಿ.ಪಂ.ಸದಸ್ಯೆ ಸುನೀತಾ ಮಂಜುನಾಥ್, ತಾ.ಪಂ.ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಗ್ರಾ.ಪಂ. ಉಪಾಧ್ಯಕ್ಷರಾಗಿದ್ದ ಡೆನ್ನೀಸ್, ಸದಸ್ಯರಾದ ಕಂಠಿ ಕಾರ್ಯಪ್ಪ, ರವಿ, ಮೇರಿ ಅಂಬುದಾಸ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಕುಮಾರ್, ಇಂಜಿನಿಯರ್ ಪೀಟರ್, ಗುತ್ತಿಗೆದಾರ ವಿ.ಟಿ.ದಿನೇಶ್, ಗ್ರಾಮಸ್ಥರು, ಇತರರು ಹಾಜರಿದ್ದರು.