ನ್ಯಾಯಾಲಯದ ಆದೇಶ ಪಾಲಿಸದ ಅರಣ್ಯ ಇಲಾಖೆ : ಎ.ಎಸ್. ಪೊನ್ನಣ್ಣ ಅಸಮಾಧಾನ

September 18, 2020

ಮಡಿಕೇರಿ ಸೆ. 18 : ಕೊಡಗು ಜಿಲ್ಲೆಯಲ್ಲಿ 2013ರಿಂದಲೇ ಕಾಡಾನೆಗಳ ಹಾವಳಿ ತೀವ್ರತೆಯನ್ನು ಪಡೆದುಕೊಂಡಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಕೆಪಿಸಿಸಿಯ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎ.ಎಸ್.ಪೊನ್ನಣ್ಣ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ 120 ಕಾಡಾನೆಗಳಿದ್ದವು, ಇಂದು ಅವುಗಳ ಸಂಖ್ಯೆ 168ಕ್ಕೆ ಏರಿಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಕಾಡಾನೆ ಉಪಟಳದ ಕುರಿತು ಬೆಳೆಗಾರ ನಂದಾಸುಬ್ಬಯ್ಯ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆ 2013ರಲ್ಲಿ ಕೊಡಗು ಜಿಲ್ಲೆಗೆ ಸಿಮೀತವಾಗಿ 13 ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಆದರೆ ಇವುಗಳಲ್ಲಿ ಒಂದೇ ಒಂದು ಆದೇಶವನ್ನು ಅರಣ್ಯ ಇಲಾಖೆ ಪಾಲಿಸಲಿಲ್ಲ ಎಂದು ಪೊನ್ನಣ್ಣ ಟೀಕಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಕಾಡಾನೆಗಳಿವೆ ಎನ್ನುವ ಬಗ್ಗೆ ಸರ್ಕಾರ ಮತ್ತು ಖುದ್ದು ಅರಣ್ಯ ಇಲಾಖೆಗೇ ಮಾಹಿತಿ ಇಲ್ಲ. ನ್ಯಾಯಾಲಯದ ಆದೇಶದಂತೆ ಕಾಫಿ ತೋಟಗಳಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಟಾಸ್ಕ್ ಫೋರ್ಸ್ ಮೂಲಕ ಸೆರೆ ಹಿಡಿದು ಪಳಗಿಸಲು ಕ್ರಮ ಕೈಗೊಳ್ಳಬೇಕು. ಕಾಡಾನೆಗಳು ಹೆಚ್ಚಾಗಿ ಕಂಡು ಬರುವ ಸಾರ್ವಜನಿಕ ಪ್ರದೇಶದಲ್ಲಿ ಸೋಲರ್ ಬೇಲಿ ಮತ್ತು ಕಂದಕವನ್ನು ನಿರ್ಮಿಸಬೇಕು. ಆದರೆ ಆದೇಶ ನೀಡಿ ಏಳು ವರ್ಷಗಳೇ ಕಳೆದರು ಅದು ಪಾಲನೆಯಾಗಿಲ್ಲ. ಕಾಡಾನೆ ಉಪಟಳದ ತೀವ್ರತೆಯನ್ನು ನಿಯಂತ್ರಿಸಲು ನ್ಯಾಯಾಲಯದ ಸಲಹೆಗಳಲ್ಲಿ ಪರಿಹಾರಗಳಿವೆ. ಆದರೆ ಅರಣ್ಯ ಇಲಾಖೆ ಯಾವುದನ್ನು ಕೂಡ ಪಾಲಿಸದೆ ನ್ಯಾಯಾಂಗ ನಿಂದನೆ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದ ಪೊನ್ನಣ್ಣ ಅವರು, ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.