ವಿ.ಬಾಡಗದಲ್ಲಿ ಪ್ರಧಾನಮಂತ್ರಿಗಳ ಜನ್ಮದಿನಾಚರಣೆ : ಬಿಜೆಪಿ ಶಕ್ತಿ ಕೇಂದ್ರ ದಿಂದ ಸ್ವಚ್ಛತಾ ಕಾರ್ಯಕ್ರಮ

18/09/2020

ಪೊನ್ನಂಪೇಟೆ, ಸೆ.18: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬವನ್ನು ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಗ್ರಾಮದ ಸ್ವಚ್ಛತಾ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಯಿತು.

ವಿ.ಬಾಡಗದ ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಆರಂಭದಲ್ಲಿ ನಡೆದ ಕಾರ್ಯಕ್ರಮವನ್ನು ವಿರಾಜಪೇಟೆ ತಾಲೂಕು ಬಿಜೆಪಿ ಕಾರ್ಯದರ್ಶಿಗಳಾದ ಅಮ್ಮುಣಿಚಂಡ ರಂಜಿ ಪೂಣಚ್ಚ ಅವರು ಗಿಡವೊಂದನ್ನು ನೆಡುವುದರ ಮೂಲಕ ಪ್ರಧಾನ ಮಂತ್ರಿಗಳ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ ಅವರು, ದೇಶದ ಪ್ರಧಾನ ಮಂತ್ರಿಗಳ ಜನ್ಮದಿನಾಚರಣೆಯನ್ನು ಭಾರತಾದ್ಯಂತ ಒಂದು ವಾರಗಳ ಕಾಲ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ವಿ.ಬಾಡಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಪೈಕಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಇದರ ಉದ್ದೇಶವನ್ನು ಈಡೇರಿಸುವ ಕಾರಣಕ್ಕಾಗಿ ಪ್ರಧಾನಮಂತ್ರಿಗಳ ಹುಟ್ಟುಹಬ್ಬದಂದು ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.

‘ಸ್ವಚ್ಛ ಭಾರತ’ ಪರಿಕಲ್ಪನೆ ಪ್ರಧಾನಮಂತ್ರಿಗಳ ಕನಸಿನ ಯೋಜನೆಆಗಿದ್ದರೂ, ಜನರ ಸಹಕಾರ ಇಲ್ಲದಿದ್ದರೆ ಈ ಯೋಜನೆಯ ಆಶಯಗಳು ಈಡೇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಯೆಡೆಗೆ ವಿಶೇಷ ಗಮನ ಹರಿಸಬೇಕಾಗಿದ್ದು ಇಂದಿನ ಅನಿವಾರ್ಯತೆಯಾಗಿದೆ. ಗ್ರಾಮ ಸ್ವಚ್ಛತಾ ಕಲ್ಪನೆ ಪ್ರತಿ ಊರಿನಲ್ಲೂ ಮೂಡಿ ಬರಬೇಕು. ಹೀಗಾದಲ್ಲಿ ಮಾತ್ರ ಪ್ರಧಾನಮಂತ್ರಿಗಳ ಉದ್ದೇಶ ಸಫಲತೆ ಕಾಣಲು ಸಾಧ್ಯ ಎಂದು ದಿಲನ್ ಬೋಪಣ್ಣ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಗ್ರಾಮ ಸ್ವಚ್ಛತಾ ಯೋಜನೆಯ ಅಂಗವಾಗಿ ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ವಿ.ಬಾಡಗದ ಶ್ರೀ ಮಹಾವಿಷ್ಣು ದೇವಸ್ಥಾನ ಮತ್ತು ಶ್ರೀ ಕಮ್ಮರಟಪ್ಪ ಕುದುರೆ ಪುಂಡ ಅಂಬಲದ ಆವರಣವನ್ನು ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರಾದ ಕೊಂಗಂಡ ಅಚ್ಚಯ್ಯ, ಕೊಂಗಂಡ ಅರುಣ್ ಮೇದಪ್ಪ, ನಂಬುಡುಮಾಡ ಮುದ್ದಪ್ಪ, ಕೋಲತಂಡ ಸುಬ್ರಮಣಿ, ವಿ.ಬಾಡಗ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಕುಪ್ಪಂಡ ಮೋಹನ್, ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ವಿ.ಬಾಡಗ ಪೊವ್ವಧಿ ಮಹಿಳಾ ಸಮಾಜದ ಅಧ್ಯಕ್ಷರಾದ ಅಮ್ಮುಣಿಚಂಡ ಪರ್ಲ್ ಮುತ್ತಮ್ಮ, ಕಾರ್ಯದರ್ಶಿ ಅಮ್ಮೆಕಂಡ ಜನಿತ ಸುಬ್ರಮಣಿ ಮೊದಲಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪೊವ್ವಧಿ ಮಹಿಳಾ ಸಮಾಜ, ಶ್ರೀ ಮಹಾವಿಷ್ಣು ದೇವಾಲಯ, ಸ್ಥಳೀಯ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.