2 ತಲೆ ಹಾವು ಮಾರಾಟಕ್ಕೆ ಯತ್ನ : ವಿರಾಜಪೇಟೆಯಲ್ಲಿ ಮಾಲು ಸಹಿತ ಓರ್ವನ ಬಂಧನ

ಮಡಿಕೇರಿ ಸೆ.18 : ದಾವಣಗೆರೆಯ ಚೆನ್ನಗಿರಿ ನಲ್ಲೂರಿನಿಂದ ಇರ್ತಲೆ ಹಾವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ವೀರಾಜಪೇಟೆ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿರಾಜಪೇಟೆ ಸಿಐಡಿ ಪೋಲಿಸ್, ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು, ಸಿದ್ದಾಪುರ ಸಮೀಪದ ಆನಂದಪುರ ಸಾರ್ವಜನಿಕ ಬಸ್ ತಂಗುದಾಣದ ಬಳಿ ಹಾವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಮೈಸೂರು ಜಿಲ್ಲೆ ಶಾಂತಿನಗರದ ನಿವಾಸಿ ಸೈಯದ್ ಮೋಮಿನ್ (23) ಎಂಬಾತನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಸುಮಾರು 3.5ಕೆ.ಜಿ ತೂಕದ 8 ಇಂಚು ದಪ್ಪ ಹಾಗೂ 4.2 ಅಡಿ ಉದ್ದದ ಹಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶದಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‍ಐ ಸಿ.ಯುಸವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಕೆ.ಬಿಸೋಮಣ್ಣ, ಟಿ.ಪಿ ಮಂಜುನಾಥ್, ಎಂ.ಬಿ.ಗಣೇಶ್, ಪಿ.ಬಿ ಮೊಣ್ಣಪ್ಪ, ಸಿಎಂ ರೇವಪ್ಪ ಭಾಗವಹಿಸಿದ್ದರು.