ರಸ್ತೆ ದುರಸ್ತಿಗೆ ತಾಳತ್ತಮನೆ ನೇತಾಜಿ ಯುವಕ ಮಂಡಲ ಒತ್ತಾಯ

18/09/2020

ಮಡಿಕೇರಿ ಸೆ.18 : ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಮಾರ್ಗ ಮಧ್ಯೆ ತಾಳತ್ತಮನೆಯಿಂದ ಅಪ್ಪಂಗಳದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ತಾಳತ್ತಮನೆಯ ನೇತಾಜಿ ಯುವಕ ಮಂಡಲ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಯುವಕ ಮಂಡಲದ ಅಧ್ಯಕ್ಷ ಬಿ.ಬಿ.ಸುದೀಪ್ ರೈ, ತಾಳತ್ತಮನೆಯಿಂದ ಅಪ್ಪಂಗಳದವರಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹಲವು ತಿಂಗಳುಗಳೇ ಕಳೆದಿದ್ದರೂ ಇಲ್ಲಿಯವರೆಗೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ವಾಹನ ಹಾಗೂ ಸಾರ್ವಜನಿಕರ ಸಂಚಾರ ಅಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಮಡಿಕೇರಿಯಿಂದ ಮೇಕೇರಿಯವರೆಗೆ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುವ ಕಾರಣ ವಿರಾಜಪೇಟೆಗೆ ತೆರಳುವ ಮತ್ತು ವಿರಾಜಪೇಟೆಯಿಂದ ಮಡಿಕೇರಿಗೆ ಬರುವ ವಾಹನಗಳು ಮೇಕೇರಿ ಬೈಪಾಸ್ ರಸ್ತೆಯ ಮೂಲಕ ಭಾಗಮಂಡಲ, ಮಂಗಳೂರು ರಸ್ತೆಯನ್ನು ಬಳಸಿ ತೆರಳಬೇಕಾಗಿದೆ. ಈ ರಸ್ತೆ ಕೂಡ ಹೊಂಡ, ಗುಂಡಿಗಳಿಂದ ಕೂಡಿದೆ.
ಕಾಂಕ್ರಿಟ್ ಕಾಮಗಾರಿ ಆರಂಭಕ್ಕೂ ಮೊದಲು ಬೈಪಾಸ್ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾಗಿಸದೆ ಏಕಾಏಕಿ ಬದಲಿ ಮಾರ್ಗದ ವ್ಯವಸ್ಥೆ ಮಾಡಿರುವುದು ಸರಿಯಾದ ಕ್ರಮವಲ್ಲ. ಅಲ್ಲದೇ ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಇದಾಗಿದ್ದು, ವಾಹನ ಸಂಚಾರವು ಅಧಿಕವಾಗಿದೆ. ತಾಳತ್ತಮನೆಯ ಮಾರ್ಗಮಧ್ಯದಲ್ಲಿ ಮೋರಿಯ ಅರ್ಧಭಾಗ ಕುಸಿದಿದ್ದು, ಅಧಿಕ ವಾಹನಗಳ ಸಂಚಾರದಿಂದಾಗಿ ಉಳಿದ ಭಾಗವು ಕುಸಿಯುವ ಆತಂಕ ಎದುರಾಗಿದೆ.
ಆದ್ದರಿಂದ ಈ ಬಗ್ಗೆ ಗಮನಹರಿಸಿ ತಾಳತ್ತಮನೆಯಿಂದ ಅಪ್ಪಂಗಳದವರೆಗಿನ ರಸ್ತೆ ಮತ್ತು ತಾಳತ್ತಮನೆಯಿಂದ ಮೇಕೇರಿಯವರೆಗಿನ ಬೈಪಾಸ್ ರಸ್ತೆಯನ್ನು ತುರ್ತಾಗಿ ದುರಸ್ತಿಪಡಿಸಬೇಕೆಂದು ಬಿ.ಬಿ.ಸುದೀಪ್ ರೈ ಒತ್ತಾಯಿಸಿದರು.
ಮನವಿ ಪತ್ರ ನೀಡುವ ಸಂದರ್ಭ ಯುವಕ ಮಂಡಲದ ಕಾರ್ಯದರ್ಶಿ ಬಿ.ಆರ್.ಯತೀಶ್ ರೈ, ಮಾಜಿ ಅಧ್ಯಕ್ಷ ಗಿರೀಶ್ ತಾಳತ್ತಮನೆ, ದಿವೇಶ್ ರೈ, ಸಲಹೆಗಾರ ಎ.ಎನ್.ರಘು ಮತ್ತಿತರ ಸದಸ್ಯರು ಹಾಜರಿದ್ದರು.