ಎ.ಕೆ.ಎಸ್. ಟ್ರಸ್ಟ್ ನಿಂದ ಕಾನೂರಿನಲ್ಲಿ ದಿನಸಿ ಕಿಟ್ ವಿತರಣೆ

September 19, 2020

ಪೊನ್ನಂಪೇಟೆ,ಸೆ.19 : ಎ.ಕೆ. ಸುಬ್ಬಯ್ಯ-ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟಿ ಎ.ಎಸ್. ನರೇನ್ ಕಾರ್ಯಪ್ಪ ಮತ್ತು ಕಾಂಗ್ರೆಸ್ ಪ್ರಮುಖರು ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್ ಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ವಿತರಿಸಿದರು.

ಕಾನೂರಿನಲ್ಲಿ ಕೊರೋನಾ ಸೋಂಕು ಪತ್ತೆಯಾದ ಕಾರಣ ಸಿಲ್ ಡೌನ್ ಗೆ ಒಳಗಾದ ಪ್ರದೇಶದ ಕಾರ್ಮಿಕರಿಗೆ ಇದೇ ಸಂದರ್ಭದಲ್ಲಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಬಳಿಕ ಕೋತೂರಿನ ವಿವಿಧ ಬಡವರ್ಗದ ಫಲಾನುಭವಿಗಳಿಗೂ ದಿನಸಿ ಕಿಟ್ ಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರು ಮತ್ತು ಟ್ರಸ್ಟಿ ಎ.ಎಸ್. ನರೇನ್ ಕಾರ್ಯಪ್ಪ ಅವರು, ಸಂಕಷ್ಟದ ಸಮಯದಲ್ಲಿ ಮಾಡುವ ಯಾವುದೇ ರೀತಿಯ ಸಹಾಯ ಬಹುಮಹತ್ವವನ್ನು ಪಡೆದುಕೊಳ್ಳುತ್ತದೆ. ಕೋವಿಡ್ ಕಾಲದಲ್ಲಿ ವಿವಿಧ ಕಾರಣಗಳಿಂದ ಸಂಕಷ್ಟ ಅನುಭವಿಸುವ ಜನತೆಗೆ ಮನೋಸ್ಥೈರ್ಯ ತುಂಬಿ ಸಮಾಜ ಅವರೊಂದಿಗೆ ಕೈಜೋಡಿಸುತ್ತದೆ ಎಂಬ ಸಂದೇಶ ರವಾನಿಸುವುದು ಕೂಡ ಈ ಕಿಟ್ ವಿತರಣೆಯ ಉದ್ದೇಶದ ಹಿಂದೆ ಅಡಗಿದೆ. ಆದ್ದರಿಂದ ಯಾರೂ ಧೃತಿಗೆಡಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೀದೇರಿರ ನವೀನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಕಾಡ್ಯಮಾಡ ಬೋಪಣ್ಣ, ಕಾನೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಂಜ್ಹಿಮಾಡ ರಮೇಶ್ ಮೊದಲಾದವರು ಪಾಲ್ಗೊಂಡಿದ್ದರು.

error: Content is protected !!