1 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿದೆ ಮಡಿಕೇರಿಯ ಶ್ರೀ ಕೋದಂಡರಾಮ ದೇವಾಲಯ : ನಿರ್ಮಾಣ ಕಾರ್ಯಕ್ಕೆ ಚಾಲನೆ

ಮಡಿಕೇರಿ ಸೆ. 19 : ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದ ನೂತನ ಗರ್ಭಗುಡಿ ಸ್ಥಾಪನೆಗಾಗಿ ಉಪ್ಪಿನಂಗಡಿಯಿಂದ ಕೆತ್ತನೆಗೊಂಡ ಶಿಲೆಗಳನ್ನು ತರಲಾಯಿತು.
ಅಂದಾಜು ರೂ. 1 ಕೋಟಿಗೂ ಅಧಿಕ ವೆಚ್ಚದಲ್ಲಿ ರೂಪುಗೊಳ್ಳುತ್ತಿರುವ ದೇವಾಲಯ ನಿರ್ಮಾಣ ಕಾರ್ಯಕ್ಕೆ ಬಾಲಾಲಯದಲ್ಲಿರುವ ಶ್ರೀ ರಾಮ ಪರಿವಾರ ಮತ್ತು ಮಹಾ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಶಿಲ್ಪಿ ವಿಜಯ್ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಎರಡು ಲಾರಿಗಳಲ್ಲಿ ಉಪ್ಪಿನಂಗಡಿಯಿಂದ ಕೆತ್ತನೆಯ ಶಿಲೆಗಳು ಆಗಮಿಸುತ್ತಿದ್ದಂತೆಯೇ, ಶ್ರೀ ಕೋದಂಡ ರಾಮ ದೇವಾಲಯ ವಿಶ್ವಸ್ಥ ಸಮಿತಿ, ಶ್ರೀ ರಾಮೋತ್ಸವ ಸಮಿತಿ ಹಾಗೂ ಜ್ಯೋತಿ ಯುವಕ ಸಂಘ ಸಹಿತ ಎಲ್ಲ ಪ್ರಮುಖರು ಶಿಲೆಗಳನ್ನು ಬರಮಾಡಿಕೊಂಡರು.
ನಗರದ ಜನರಲ್ ತಿಮ್ಮಯ್ಯ ವೃತ್ತ, ಚಿಕ್ಕಪೇಟೆ, ಹಳೆಯ ಬಸ್ ನಿಲ್ದಾಣ, ಕಾಲೇಜು ರಸ್ತೆ, ರಾಣಿಪೇಟೆ ಮಾರ್ಗವಾಗಿ ಶಿಲೆಗಳನ್ನು ಹೊತ್ತ ಲಾರಿಗಳು ಸಾಗುತ್ತಿದ್ದಂತೆಯೇ, ಮಲ್ಲಿಕಾರ್ಜುನ ನಗರದ ಯುವಕರು ಮತ್ತು ಸಮಿತಿ ಪ್ರಮುಖರು ಓಂಕಾರ ಧ್ವಜ ಸಹಿತ ಉದ್ಘೋಷಗಳೊಂದಿಗೆ ದೇವಾಲಯ ಸನ್ನಿಧಿಗೆ ಬರಮಾಡಿಕೊಂಡರು.
ಬಳಿಕ ಸನ್ನಿಧಿಯ ಅರ್ಚಕರು, ಪದಾಧಿಕಾರಿಗಳು, ಭಕ್ತರು ವಿಶೇಷ ಪ್ರಾರ್ಥನೆಯೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿದರು.



