ಕೊಡಗಿನ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಪೂರ್ಣ

ಮಡಿಕೇರಿ ಸೆ.19 : ಕಳೆದ ಕೆಲ ದಿನಗಳಿಂದ ಸಾದಾರಣವಾಗಿ ಆಗುತ್ತಿದ್ದ ಮಳೆ, ಮತ್ತೆ ಚುರುಕುಗೊಂಡಿದೆ. ಜಿಲ್ಲೆಯಾದ್ಯಂತ ಶನಿವಾರ ಬೆಳಗ್ಗೆಯಿಂದಲೇ ಬಿಡುವು ನೀಡದೇ ಜೋರು ಮಳೆಯಾಗುತ್ತಿದೆ. ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಇದರೊಂದಿಗೆ ಕೃಷಿ ಚಟುವಟಿಕೆಗಳು ಸಹ ವೇಗ ಪಡೆದುಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಭತ್ತ ನಾಟಿಯು ಜಿಲ್ಲೆಗೆ 30,500 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 23,010 ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಮಾಡಲಾಗಿದ್ದು, ಶೇ.75.44 ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ತಿಳಿಸಿದ್ದಾರೆ.
ತಾಲೂಕುವಾರು ಮಳೆಯಾಶ್ರಿತ ಭತ್ತದ ಬೆಳೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿಗೆ 6,500 ಹೆಕ್ಟೇರ್ ಗುರಿಯಿದ್ದು, 4,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಸೋಮವಾರಪೇಟೆ ತಾಲೂಕಿಗೆ 7,600 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 6,980 ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ವಿರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದ್ದು, 9,100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಹಾರಂಗಿ ನೀರಾವರಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿಗೆ 2 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಗುರಿಯಿದ್ದು, 1,870 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜೊತೆಗೆ ಚಿಕ್ಲಿಹೊಳೆ ನೀರಾವರಿ ಪ್ರದೇಶಕ್ಕೆ 400 ಹೆಕ್ಟೇರ್ ಬಿತ್ತನೆ ಗುರಿಯಿದ್ದು, 360 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಮುಸುಕಿನ ಜೋಳ ಬೆಳೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಗುರಿ ಇದ್ದು, ಈಗಾಗಲೇ 3,050 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಶಬಾನಾ ಎಂ.ಶೇಖ್ ಅವರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಕೃಷಿ ಚಟುವಟಿಕೆಗೆ ಅವಶ್ಯವಾದ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರಸಗೊಬ್ಬರದಲ್ಲಿ ಯಾವುದೇ ರೀತಿ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
