ಮೆಗಾ ಇ-ಲೋಕ ಅದಾಲತ್ : 4,907 ಪ್ರಕರಣಗಳು ಇತ್ಯರ್ಥ

ಮಡಿಕೇರಿ ಸೆ.19 : ರಾಜ್ಯಾದ್ಯಂತ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಜಿಲ್ಲೆಯ ನ್ಯಾಯಾಲಯದಲ್ಲಿ ಬಾಕಿ ಇದ್ದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ 4,907 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ 2,180 ವ್ಯಾಜ್ಯ ಪೂರ್ವ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 1,997 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಲ್ಲದೆ 3,77,47,000 ರೂ. ಸಂಗ್ರಹವಾಗಿದೆ.
5,895 ನ್ಯಾಯಾಲಯದಲ್ಲಿನ ಬಾಕಿ ಪ್ರಕರಣಗಳ ಪೈಕಿ ಶನಿವಾರದಂದು 2,936 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದರೊಂದಿಗೆ 7,39,17,979 ಕೋಟಿ ರೂ. ಸಂಗ್ರಹವಾಗಿದೆ ಎಂದು ನೂರುನ್ನೀಸ ಅವರು ತಿಳಿಸಿದರು.
ಒಟ್ಟಾರೆ ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು ನ್ಯಾಯಾಲಯದಲ್ಲಿನ ಬಾಕಿ ಪ್ರಕರಣಗಳು ಸೇರಿದಂತೆ 8,075 ಪ್ರಕರಣಗಳಲ್ಲಿ 4,907 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, 7,39,17,979 ಕೋಟಿ. ರೂ ಸಂಗ್ರಹವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‍ಲೈನ್, ವೀಡಿಯೋ ಕಾನ್ಫರೆನ್ಸ್, ಎಸ್‍ಎಂಎಸ್, ವಾಟ್ಸ್‍ಆಪ್, ಎಲೆಕ್ಟ್ರಿಕ್ ಮೋಡ್ ಮೂಲಕ ಸಂಪರ್ಕಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಕಾನೂನು ಸೇವಾ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೆಗಾ ಇ-ಲೋಕ ಅದಾಲತ್ ನಡೆದಿದ್ದು ರಾಜಿ ಅಥವಾ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನೂರುನ್ನೀಸ ಅವರು ತಿಳಿಸಿದರು.