ಭಾಗಮಂಡಲದಲ್ಲಿ ದಾಖಲೆಯ 7 ಇಂಚು ಮಳೆ

September 20, 2020

ಮಡಿಕೇರಿ ಸೆ.20 : ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರೆದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನೀರು ರಸ್ತೆಯನ್ನು ಆವರಿಸಲು ಕೆಲವು ಅಡಿಗಳಷ್ಟೇ ಬಾಕಿ ಇದೆ. ಕಾವೇರಿ ಮತ್ತು ಉಪನದಿಗಳು ತುಂಬಿ ಹರಿಯುತ್ತಿರುವುದರಿಂದ ಕುಶಾಲನಗರ ವ್ಯಾಪ್ತಿಯಲ್ಲಿ ನದಿಯ ನೀರು 14 ಅಡಿಗಳಷ್ಟು ಏರಿಕೆಯಾಗಿದೆ. ದಕ್ಷಿಣ ಕೊಡಗಿನ ವಿವಧೆಡೆ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಕಾಫಿ ತೋಟಗಳು ಕೊಳೆ ರೋಗದ ಆತಂಕವನ್ನು ಎದುರಿಸುತ್ತಿವೆ.
ನಿರಂತರವಾಗಿ ಸುರಿಯುತ್ತಿರುವ ಮಳೆ ಮಡಿಕೇರಿಯ ಎತ್ತರದ ಪ್ರದೇಶದ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಆಗಸ್ಟ್ ತಿಂಗಳಿನ ಮಹಾಮಳೆಯಿಂದ ಪಾರಾದವರು ಇದೀಗ ದಿಢೀರ್ ಆಗಿ ಸುರಿಯುತ್ತಿರುವ ಮಳೆಯಿಂದ ಎಲ್ಲಿ ಅನಾಹುತ ಸಂಭವಿಸುತ್ತದೋ ಎನ್ನುವ ಭಯದಲ್ಲೇ ದಿನ ದೂಡುತ್ತಿದ್ದಾರೆ.
ಮಡಿಕೇರಿ ನಗರದಲ್ಲಿ ಮೈಕೊರೆಯುವ ಚಳಿ ಮತ್ತು ಮಂಜು ಮುಸುಕಿದ ವಾತಾವರಣದೊಂದಿಗೆ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಮಳೆ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 7 ಇಂಚು ಮಳೆಯಾಗಿದೆ. ಸಂಪಾಜೆ 6.5 ಮತ್ತು ಮಡಿಕೇರಿಯಲ್ಲಿ 4 ಇಂಚು ಮಳೆ ಸುರಿದಿದೆ. ವಿರಾಜಪೇಟೆ 3, ಹುದಿಕೇರಿ 2.5, ಶ್ರೀಮಂಗಲ 2, ಪೊನ್ನಂಪೇಟೆ 1, ಅಮ್ಮತ್ತಿ 2, ಬಾಳೆಲೆ 1, ಸೋಮವಾರಪೇಟೆ 1.5, ಶಾಂತಳ್ಳಿ 3, ಕೊಡ್ಲಿಪೇಟೆ 1, ಕುಶಾಲನಗರ 1, ಸುಂಟಿಕೊಪ್ಪ 2 ಇಂಚು ಮಳೆಯಾಗಿದೆ.