ಹೆಬ್ಬಲಸು ನಾಟಾಗಳ ಅಕ್ರಮ ಸಾಗಾಟ : ಪಾಲೂರು ಬಳಿ 5 ಲಕ್ಷ ರೂ. ಮೌಲ್ಯದ ಮಾಲು ವಶ

21/09/2020

ಮಡಿಕೇರಿ ಸೆ.20 : ಹೆಬ್ಬಲಸು ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಮಡಿಕೇರಿ ಉಪ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳು ಲಾರಿ ಸಹಿತ ಸುಮಾರು 5 ಲಕ್ಷ ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ತಾಲ್ಲೂಕಿನ ಪಾಲೂರು ಬಳಿ ಸಿಬ್ಬಂದಿಗಳು ದಾಳಿ ನಡೆಸಿದ ಸಂದರ್ಭ ಸ್ಥಳದಲ್ಲಿದ್ದ 10ಕ್ಕೂ ಹೆಚ್ಚು ಆರೋಪಿಗಳು ಪರಾರಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ಆರೋಪಿಗಳ ಸೆರೆಗೆ ಅರಣ್ಯ ಇಲಾಖೆ ಹೊಂಚು ಹಾಕಿತ್ತು. ಶನಿವಾರ ತಡ ರಾತ್ರಿ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಮರವನ್ನು ಲಾರಿಗೆ ತುಂಬಿಸುತ್ತಿದ್ದ ವೇಳೆ ದಾಳಿ ನಡೆಸಿದರು. ಸ್ಥಳದಲ್ಲಿದ್ದ ಲಾರಿ ಹಾಗೂ ಬೃಹತ್ ಗಾತ್ರದ ಹೆಬ್ಬಲಸು ಮರದ ನಾಟಾಗಳನ್ನು ವಶಕ್ಕೆ ಪಡೆದರು.

ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಮರವನ್ನು ಲಾರಿ ಸಹಿತ ಕುಶಾಲನಗರ ಸಮೀಪದ ಆನೆಕಾಡು ಅರಣ್ಯ ಇಲಾಖೆಯ ಡಿಪ್ಪೋಗೆ ಸ್ಥಳಾಂತರ ಮಾಡಲಾಗಿದೆ. ಡಿಎಫ್‍ಓ ಪ್ರಭಾಕರನ್ ಮಾರ್ಗದರ್ಶನದಲ್ಲಿ ಮಡಿಕೇರಿ ಎಸಿಎಫ್ ನಿಲೇಶ್ ಶಿಂಧೆ, ರೇಂಜರ್ ದೇವಯ್ಯ, ಅರಣ್ಯ ರಕ್ಷಕರು, ಆರ್‍ಆರ್‍ಟಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳು ವಿವಿಧ ಕಡೆಗಳಲ್ಲಿ ಹೆಬ್ಬಲಸು ಮರಗಳನ್ನು ಕಡಿದು ಅದನ್ನು ತುಂಡುಗಳನ್ನಾಗಿ ಪರಿವರ್ತಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ್ದೇವೆ. ಈ ಸಂದರ್ಭ 10ಕ್ಕೂ ಹೆಚ್ಚು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ದ ಅರಣ್ಯ ಇಲಾಖಾ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾಲೂರು ವ್ಯಾಪ್ತಿಯಲ್ಲಿ ಮರಗಳನ್ನು ಕಡಿದಿರುವ ಸ್ಥಳದ ಮಹಜರು ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.
ನೀಲೇಶ್ ಶಿಂಧೆ, ಎಸಿಎಫ್ ಮಡಿಕೇರಿ.