ಉಡುಪಿಯ ಹಲವು ಪ್ರದೇಶ ಮುಳುಗಡೆ

ಉಡುಪಿ ಸೆ.21 : ಉಡುಪಿ ಜಿಲ್ಲೆಯಾದ್ಯಂತ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ನಗರ ಮತ್ತು ಮಣಿಪಾಲ್ನ ಹಲವಾರು ಪ್ರದೇಶಗಳು ಮುಳುಗಡೆಯಾಗಿದೆ. ಮನೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿವೆ.
ನಗರದ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಜಿಲ್ಲೆಯ ಇತಿಹಾಸದಲ್ಲಿ ನಗರ ಇಂತಹ ಮಳೆಯನ್ನು ಕಂಡಿಲ್ಲ ಎಂದು ಹೇಳಲಾಗಿದೆ. ನೀರಿನ ಅಪಾರ ಹರಿವಿನ ಕಾರಣ ನಗರದ ಪ್ರಮುಖ ಬೀದಿಗಳಲ್ಲಿನ ಸಂಚಾರ ಅಸ್ತ್ಯವ್ಯಸ್ಥವಾಗಿದೆ.
ಪುತ್ತಿಗೆ ಮಠ ಗುಂಡಿಬೈಲ್-ಕಲ್ಸಂಕ ರಸ್ತೆ, ಬೈಲ್ಕೆರೆ ಮಠದಬೆಟ್ಟು, ಉಡುಪಿ-ಮಣಿಪಾಲ್ ಮುಖ್ಯ ರಸ್ತೆಗಳು ನೀರಿನಿಂದ ಮುಳುಗಿ ಸಂಚಾರಕ್ಕೆ ಅಡ್ಡಿಯಾಗಿದೆ.
ಬಡಗುಪೇಟೆಯ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಬೈಲುಕೆರೆ, ಕುಂಜಿಬೆಟ್ಟು ಮತ್ತು ಆದಿಯುಡುಪಿ ಪ್ರದೇಶವೂ ಜಲಾವೃತವಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಸಂದರ್ಶಕರ ಪಾರ್ಕಿಂಗ್ ಪ್ರದೇಶವು ನೀರಿನಲ್ಲಿ ಮುಳುಗಿದೆ. ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಅಧಿಕವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಮಿಲಿಟರಿ ಹೆಲಿಕಾಪ್ಟರ್ ಬಳಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
