ಡ್ರಗ್ಸ್ ದಂಧೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಜನಜಾಗೃತಿ ವೇದಿಕೆ ಒತ್ತಾಯ

21/09/2020

ಮಡಿಕೇರಿ ಸೆ.21 : ಮಾದಕ ವಸ್ತುಗಳ ದಂಧೆ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಕೊಡಗು ಜಿಲ್ಲಾ ಶಾಖೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ವೇದಿಕೆಯ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಮಾದಕ ವಸ್ತುಗಳ ಸೇವನೆ ಮತ್ತು ಪೂರೈಕೆ ಕುರಿತು ನೂರಾರು ಪ್ರಕರಣಗಳು ವರದಿಯಾಗುತ್ತಿದ್ದು, ಡ್ರಗ್ಸ್ ದಂಧೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಮಾದಕ ವಸ್ತುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಾಖಲಾಗುವ ಎಲ್ಲಾ ಪ್ರಕರಣಗಳನ್ನು ನಿಷ್ಪಕ್ಷಪಾತ ತನಿಖೆ ಮಾಡಿ ಸಮಾಜವನ್ನು ರಕ್ಷಿಸಬೇಕು, ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಕರಾಳ ಹಸ್ತ ವ್ಯಾಪಿಸದಂತೆ ಎಚ್ಚರವಹಿಸಬೇಕು. ಶಾಲಾ, ಕಾಲೇಜು ಆವರಣದ ಒಳಗೆ ಮತ್ತು ಹೊರಗೆ ಅಪಾಯವನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಒತ್ತಾಯಿಸಿದರು.
ಸಾಂಸ್ಕೃತಿಕ ವಲಯದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಂತರ್ಜಾಲವನ್ನು ಬಳಸಿಕೊಂಡು ಡ್ರಗ್ಸ್ ವ್ಯವಹಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ರಂಗದಲ್ಲಿ ದಂಧೆಕೋರರಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಳೆದ ಮೂರು ದಶಕಗಳಿಂದ ದುಶ್ಚಟಗಳ ವಿರುದ್ಧ ಜಾಗೃತಿ ಮತ್ತು ಜನಾಂದೋಲನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಜನಜಾಗೃತಿ ವೇದಿಕೆ ಹಾಗೂ ಸಮಾನ ಮನಸ್ಕರು ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿದೆ ಎಂದರು.
ವೇದಿಕೆಯ ಉಪಾಧ್ಯಕ್ಷ ದೇವರಾಜ್, ಸೋಮವಾರಪೇಟೆ ತಾಲ್ಲೂಕು ಉಪಾಧ್ಯಕ್ಷ ಚಂದ್ರಮೋಹನ್, ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ಧನಂಜಯ, ಜಿಲ್ಲಾ ಕಾರ್ಯದರ್ಶಿ ಎ.ಯೋಗೀಶ್, ಕೋಶಾಧಿಕಾರಿ ಎ.ಟಿ.ರಂಗಸ್ವಾಮಿ, ಸದಸ್ಯ ಷಣ್ಮುಖ ರಾವ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.