ಸೆ.24 ರಂದು ಮಡಿಕೇರಿಯಲ್ಲಿ 11 ವಿವಿಧ ಸಂಘಟನೆಗಳಿಂದ ಪ್ರತಿಭಟನೆ

21/09/2020

ಮಡಿಕೇರಿ ಸೆ.21 : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ವಿರೋಧಿಸಿ, ಶ್ರಮಿಕ ವರ್ಗದ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನ ಕೊಡಗು ಜಿಲ್ಲಾ ಸಮಿತಿಯಿಂದ ಸೆ.24 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ವಿಧಾನಸೌಧ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹನ್ನೊಂದು ವಿವಿಧ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರ ಕೊರೊನಾ ಸಂದರ್ಭದಲ್ಲಿ ಜನಪರ ಕಾಳಜಿಯನ್ನು ಹೊಂದಿರಬೇಕಿತ್ತು. ಆದರೆ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ ವಿರೋಧಿಯಾಗಿ ನಡೆದುಕೊಂಡಿದೆ. ಕೃಷಿ, ಸಾರ್ವಜನಿಕ ಕ್ಷೇತ್ರ ಮತ್ತು ಸೇವೆಗಳೆಲ್ಲವನ್ನೂ ಕಾರ್ಪೋರೇಟ್‍ಗಳಿಗೆ ಪೂರಕವಾಗುವಂತೆ ರೂಪಿಸಲು ಕಾನೂನುಗಳನ್ನು ಬದಲಾಯಿಸಲಾಗಿದೆ ಎಂದು ದೂರಿದರು.
ಕೊರೊನಾ ಸಂದರ್ಭದಲ್ಲಿ 2 ಕೋಟಿಗೂ ಹೆಚ್ಚಿನ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇವರಿಗೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ. ಲಾಭದಾಯಕ ಸಂಸ್ಥೆಗಳಾದ ಎಲ್‍ಐಸಿ, ರೈಲ್ವೆ, ಹೆಚ್‍ಎಎಲ್, ಬಿಇಎಂಎಲ್, ಬಿಎಸ್‍ಎನ್‍ಎಲ್ ಸಂಸ್ಥೆಗಳನ್ನು ಖಾಸಗೀಕರಣಕ್ಕೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಕಳೆದ ಐದು ತಿಂಗಳಿಂದ ವೇತನವನ್ನೇ ನೀಡಿಲ್ಲ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಕಷ್ಟಗಳ ನೆರವಿಗೆ ಕೇಂದ್ರ ಮುಂದೆ ಬರುತ್ತಿಲ್ಲವೆಂದು ಸಾಬು ಟೀಕಿಸಿದರು.
::: ಬೇಡಿಕೆಗಳು :::
2020-21ರ ಸಾಲಿನ ತುಟ್ಟಿಭತ್ಯೆಯನ್ನು ಬಾಕಿ ಸಹಿತ ನೀಡಬೇಕು, ಲಾಕ್‍ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಕಾರ್ಮಿಕ ಇಲಾಖೆಯಲ್ಲಿ ಇರುವ ಅರ್ಜಿಗಳನ್ನು ತ್ವರಿತವಾಗಿ ಸಂಧಾನ ಸಭೆ ನಡೆಸಿ ಇತ್ಯರ್ಥ ಮಾಡಿ ಕಾರ್ಮಿಕರಿಗೆ ಪರಿಹಾರ ದೊರಕಿಸಿಕೊಡಬೇಕು, ಕೋವಿಡ್ ಲಾಕ್‍ಡೌನ್ ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಕಡಿತ ಮೊದಲಾದ ಕ್ರಮಗಳನ್ನು ಕೈಬಿಡಬೇಕು, ರಾಜ್ಯ ಸರ್ಕಾರ ಘೋಷಿಸಿರುವ 2202 ಕೋಟಿ ಪರಿಹಾರವನ್ನು 125 ಕ್ಕೂ ಹೆಚ್ಚು ವಲಯದ ಕೋಟ್ಯಾಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಘೋಷಿಸಬೇಕು, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‍ಟಿ ಮತ್ತು ಪರಿಹಾರವನ್ನು ಕೂಡಲೇ ರಾಜ್ಯಕ್ಕೆ ನೀಡಬೇಕು, ಕೊರೊನಾ ವಾರಿಯರ್ಸ್‍ಗೆ ಪಿಪಿಇ ಕಿಟ್‍ಗಳು, ಆರೋಗ್ಯ ವಿಮೆ, ಪೆÇ್ರೀತ್ಸಾಹ ಧನ, ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ವಿಸ್ತರಿಸಬೇಕು, ಯೋಜನಾ ಕಾರ್ಮಿಕರಿಗೆ ಗೌರವಧನ ಪಾವತಿಸಬೇಕು, ಸರಕಾರಿ ಆಸ್ಪತ್ರೆಯ ನಾನ್ ಕ್ಲೀನಿಂಗ್ ಡಿ ಗ್ರೂಪ್ ಇನ್ನಿತರ ವಿಭಾಗದ ಕಾರ್ಮಿಕರನ್ನು ಗುತ್ತಿಗೆಯಿಂದ ವಿಮೋಚನೆಗೊಳಿಸಿ ಖಾಯಂಗೊಳಿಸಬೇಕು, ಈಗಿರುವ ಎಲ್ಲಾ ಗುತ್ತಿಗೆ ಸಿಬ್ಬಂದಿಗಳಿಗೆ ಕೋವಿಡ್ ಪ್ರೋತ್ಸಾಹ ಧನ ನೀಡಬೇಕು, ರೈತರನ್ನು, ಕಾರ್ಮಿಕರನ್ನು, ಕೃಷಿ ಕೂಲಿಕಾರರನ್ನು ಕಾರ್ಪೋರೇಟ್ ಹಿಡಿತಕ್ಕೆ ಒಪ್ಪಿಸುವ ಸುಗ್ರೀವಾಜ್ಞೆಗಳನ್ನು ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವುದೆಂದು ಸಾಬು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎನ್.ಡಿ.ಕುಟ್ಟಪ್ಪ ಹಾಗೂ ಖಜಾಂಚಿ ಹೆಚ್.ಬಿ.ರಮೇಶ್ ಉಪಸ್ಥಿತರಿದ್ದರು.