ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಕಲ್ಪಿಸಲು ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಒತ್ತಾಯ

21/09/2020

ಸೋಮವಾರಪೇಟೆ : ಪ್ರಕೃತಿ ವಿಕೋಪ ಹಾಗೂ ಅಕಾಲಿಕ ಮಳೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಬೆಳೆಗಾರರ 10 ಎಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿಕೊಡಬೇಕೆಂದು ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಈಗಾಗಲೇ ಸರ್ಕಾರ ಭತ್ತ ಬೆಳೆಗಾರರಿಗೆ ಉಚಿತ ವಿದ್ಯುತ್ ಕಲ್ಪಿಸುತ್ತಿದೆ. ಕಾಫಿ ಬೆಳೆಗಾರರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ತಹಸೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ಮುರ್ನಾಲ್ಕು ವರ್ಷಗಳಿಂದ ಧಾರಾಕಾರ ಮಳೆಗೆ ಕಾಫಿ ಫಸಲು ಹಾನಿಯಾಗುತ್ತಿದೆ. ತೋಟಗಳು ರೋಗಪೀಡಿತವಾಗಿವೆ. ಬಿಳಿಕಾಂಡಕೊರಕ, ಎಲೆಚುಕ್ಕಿರೋಗ, ಕೊಳೆರೋಗ, ರೆಕ್ಕೆಬೋರರ್, ಬೆರ್ರಿಬೋರರ್ ಮುಂತಾದ ರೋಗಗಳಿಂದ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಮಳೆಬೀಳದ ಹಿನ್ನೆಲೆಯಲ್ಲಿ ಕಾಫಿ ಬ್ಲಾಸಂಗೆ ಸಮಸ್ಯೆಯಾಗಿ ಫಸಲು ಬರುತ್ತಿಲ್ಲ. ಬೋರ್‍ವೆಲ್, ಕೆರೆ, ಹೊಳೆಗಳಿಂದ ನೀರನ್ನು ಸ್ಲ್ರಿಂಕ್ಲರ್ ಮಾಡಿಯೇ ಕಾಫಿ ತೋಟಗಳನ್ನು ಉಳಿಸಿಕೊಳ್ಳಬೇಕಾಗಿದೆ. ಈ ಕಾರಣದಿಂದ ಉಚಿತ ವಿದ್ಯುತ್ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಲಿಂಗೇರಿ ರಾಜೇಶ್ ತಿಳಿಸಿದರು.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕಾಫಿ ಬೆಳೆಗಾರರ 10ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇನ್ನಾದರೂ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಪತ್ರ ಸಲ್ಲಿಸುವ ಸಂದರ್ಭ ಉಪಾಧ್ಯಕ್ಷ ಎಸ್.ಎಂ.ಡಿಸಿಲ್ವಾ, ಪದಾಧಿಕಾರಿಗಳಾದ ಬಿ.ಎನ್.ಬಸವರಾಜ್, ಕೆ.ಪಿ.ದಿನೇಶ್, ಶಿವಪ್ಪ, ಕೃಷ್ಣಪ್ಪ ಮತ್ತಿತರರು ಇದ್ದರು.