ಸೋಮವಾರಪೇಟೆಯಲ್ಲಿ ಧಾರಾಕಾರ ಮಳೆ : ಮರ ಬಿದ್ದು ಮನೆಗೆ ಹಾನಿ

21/09/2020

ಸೋಮವಾರಪೇಟೆ : ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬಿರುಗಾಳಿಗೆ ಮರಗಳು ನೆಲಕ್ಕುರುಳುತ್ತಿರುವುದರಿಂದ ಹಾನಿ ಮುಂದುವರಿದಿದೆ.
ಭಾನುವಾರದಂದು ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೂತಿ-ಯಡದಂಟೆ ಗ್ರಾಮದ ಬಿ.ಎಂ.ಮೋಹನ್ ಅವರ ಮನೆ ಮೇಲೆ ಮರಬಿದ್ದ ಪರಿಣಾಮ ಹಾನಿಯಾಗಿದೆ.
ಗೌಡಳ್ಳಿ ಗ್ರಾಪಂ ವ್ಯಾಪ್ತಿಯ ಅಜ್ಜಳ್ಳಿ ಗ್ರಾಮದ ಮುಖ್ಯ ರಸ್ತೆಯ ಮೇಲೆ ಭಾನುವಾರ ರಾತ್ರಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಕೆಲ ಸಮಯ ಸಮಸ್ಯೆಯಾಗಿತ್ತು. ತಾಕೇರಿಗೆ ತೆರಳುವ ರಸ್ತೆಯ ದುದ್ದುಗಲ್ಲು ಸಮೀಪ ಬೈನೆ ಮರ ರಸ್ತೆಗಡ್ಡಲಾಗಿ ಬಿದ್ದಿದ್ದು, ಸೋಮವಾರ ಬೆಳಿಗ್ಗೆ ಸ್ಥಳೀಯರು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಶಾಂತಳ್ಳಿ ಹೋಬಳಿಯಲ್ಲಿ ಅತೀಹೆಚ್ಚು ಮಳೆ ಬೀಳುತ್ತಿರುವುದರಿಂದ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಕಾಫಿ, ಏಲಕ್ಕಿ ತೋಟಗಳಲ್ಲಿ ಮರಗಳು ಬಿದ್ದಿವೆ. ಶೀತ ಹೆಚ್ಚಾದ ಪರಿಣಾಮ ಕಾಫಿ ಕಾಯಿ ಉದುರುತ್ತಿವೆ. ಕಾಳುಮೆಣಸು ಬಳ್ಳಿಗಳಿಗೆ ಕೊಳೆರೋಗ ಬಾಧೆ ಜಾಸ್ತಿಯಾಗಿದೆ ಎಂದು ಕೃಷಿಕ ತಾಕೇರಿ ಪ್ರಕಾಶ್ ಹೇಳಿದರು.
ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 131.2ಮಿ.ಮೀ, ಸೋಮವಾರಪೇಟೆ 54, ಕೊಡ್ಲಿಪೇಟೆ 50.2, ಸುಂಠಿಕೊಪ್ಪ 31, ಶನಿವಾರಸಂತೆ 27, ಕುಶಾಲನಗರ 20 ಮಿ.ಮೀ.ಮಳೆಯಾಗಿದೆ.