ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಮಳೆ

21/09/2020

ಮಡಿಕೇರಿ ಸೆ.21 : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾಗಮಂಡಲ, ಶಾಂತಳ್ಳಿ, ಮಡಿಕೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ.
ನಾಡಿನ ಜೀವನಾಡಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರೊಂದಿಗೆ ಕಾವೇರಿ ಭಾಗದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯಕ್ಕೂ ಸಹ ಹೆಚ್ಚಿನ ಒಳಹರಿವು ಹರಿದು ಬರುತ್ತಿದೆ.
ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿತ್ತು. ಬಳಿಕ ಕೆಲ ದಿನಗಳಿಂದ ಬಿಡುವು ಪಡೆದಿದ್ದ ಮಳೆ. ಮತ್ತೆ ಬಿರುಸುಗೊಂಡಿದೆ. ಜೊತೆಗೆ ವಿಪರೀತ ಶೀತ ಗಾಳಿ ಬೀಸುತ್ತಿದೆ.
ಸೆಪ್ಟೆಂಬರ್, 19 ರ ಶನಿವಾರದಂದು ಜಿಲ್ಲಾ ಸರಾಸರಿ ಮಳೆಯ ಪ್ರಮಾಣವು 19.73 ಮಿಲಿ ಮೀಟರ್ ಆಗಿದ್ದು, ಸೆ.20 ರಂದು 66.75 ಮಿಲಿ ಮೀಟರ್ ಮಳೆಯಾಗಿದೆ. ಸೆ.21 ರಂದು ಜಿಲ್ಲಾ ಸರಾಸರಿ ಮಳೆಯ ಪ್ರಮಾಣವು 64.19 ಮಿ.ಮೀ. ಆಗಿದೆ.
ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರದಂದು 135 ಮಿ.ಮೀ., ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 131.20 ಮಿ.ಮೀ., ಮಡಿಕೇರಿ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 96.40 ಮಿ.ಮೀ. ಗರಿಷ್ಟ ಮಳೆಯಾಗಿದೆ.
ಅಲ್ಲದೆ ಅಜ್ಜಲ್ಲಿ-ಶನಿವಾರಸಂತೆ ಮಾರ್ಗದ ರಸ್ತೆಯಲ್ಲಿ ಮರ ಬಿದ್ದಿದ್ದು, ಮರವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗಿದೆ.
ಇನ್ನು ಕಳೆದ 3 ದಿನಗಳಿಂದ ಹಾರಂಗಿ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಿದೆ. ಸೆ.19 ರಂದು ಜಲಾಶಯಕ್ಕೆ 2,981 ಕ್ಯುಸೆಕ್ ನೀರಿನ ಒಳಹರಿವಿದ್ದು, ಸೆ.20 ರಂದು ಒಳಹರಿವಿನ ಪ್ರಮಾಣ 5,819 ಕ್ಯುಸೆಕ್ ಗೆ ಏರಿಕೆಯಾಗಿದೆ. ಸೆ.21 ರಂದು 8666 ಕ್ಯುಸೆಕ್ ನಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದೆ. ಈ ಮೂಲಕ ಸೋಮವಾರದಂದು ನದಿಗೆ ಹೆಚ್ಚುವರಿಯಾಗಿ 11,854 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ.
ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ಕೆಲವು ದಿನಗಳಲ್ಲಿ 40 ರಿಂದ 50 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಅಲ್ಲದೆ ಯಾವುದೇ ಟ್ರಾನ್ಸ್ ಫಾರ್ಮರ್ ಗಳಿಗೂ ಹಾನಿ ಸಂಭವಿಸಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.
ವಿದ್ಯುತ್ ಕಂಬ ಬಿದ್ದು ಹಾನಿಗೀಡಾದ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿ, ಸೆಸ್ಕ್ ತಂಡ ಅಲ್ಲಿನ ಹಾನಿಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಜಿಲ್ಲಾಡಳಿತ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ 24*7 ಕಂಟ್ರೋಲ್ ರೂಂ ಸಂಖ್ಯೆ 0827-221077, ವ್ಯಾಟ್ಸ್‍ಆಪ್ ಸಂಖ್ಯೆ 8550001077 ನ್ನು ಸಂಪರ್ಕಿಸಬಹುದು.