ಕೊಡಗಿನಲ್ಲಿ 99 ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆದಿದ್ದಾರೆ

ಮಡಿಕೇರಿ ಸೆ.21 : ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆ, ವಿರಾಜಪೇಟೆ ಮತ್ತು ಸೋಮವಾರಪೇಟೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ತಿಳಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದೆಯೇ?, ಇದ್ದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಸಂಖ್ಯೆ ಎಷ್ಟು ಮತ್ತು ಅವು ಯಾವುವು ಎಂದು ಪ್ರಶ್ನಿಸಿದರು.
ಈ ಡಯಾಲಿಸಿಸ್ ಕೇಂದ್ರಗಳು ಪ್ರತಿ ದಿನ ಎಷ್ಟು ರೋಗಿಗಳಿಗೆ ಸೇವೆ ನೀಡುವ ಸಾಮಥ್ರ್ಯ ಹೊಂದಿವೆ ಹಾಗೂ ಈ ಕೇಂದ್ರಗಳಲ್ಲಿ ಕಳೆದ 3 ತಿಂಗಳಲ್ಲಿ ಸೇವೆ ಪಡೆದ ರೋಗಿಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ಪ್ರತಿ ದಿನದ ವಿವರದೊಂದಿಗೆ ಮಾಹಿತಿ ನೀಡುವಂತೆ ಕೇಳಿದರು.
ಸಚಿವರಾದ ಬಿ.ಶ್ರೀರಾಮುಲು ಅವರು ಉತ್ತರಿಸಿ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 21, ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಮತ್ತು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 9 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಕಳೆದ 3 ತಿಂಗಳಿನಲ್ಲಿ 99 ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆದಿದ್ದಾರೆ ಎಂದು ಸಚಿವರು ಉತ್ತರಿಸಿದರು.
ವೀಣಾ ಅಚ್ಚಯ್ಯ ಅವರು ಮಾತನಾಡಿ, ಈ ಡಯಾಲಿಸಿಸ್ ಕೇಂದ್ರಗಳಲ್ಲಿ ಇರಬೇಕಾದ ಮೂಲ ಸೌಕರ್ಯಗಳೇನು ಮತ್ತು ಕರ್ತವ್ಯ ನಿರ್ವಹಿಸಬೇಕಾದ ವೈದ್ಯ ಹಾಗೂ ಇತರ ಸಿಬ್ಬಂದಿಗಳ ಸಂಖ್ಯೆ ಎಷ್ಟು. ಆ ಪ್ರಮಾಣದಲ್ಲಿ ವೈದ್ಯರನ್ನು ನಿಯೋಜಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಮಾತನಾಡಿ ಇಲಾಖೆಯ ವತಿಯಿಂದ ಸ್ಥಳ, ವಿದ್ಯುತ್ ಹಾಗೂ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಏಜನ್ಸಿಯವರಿಂದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 10 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 2 ಡಯಾಲಿಸಿಸ್ ಯಂತ್ರಗಳು, ಆರ್.ಒ ನೀರಿನ ವ್ಯವಸ್ಥೆ, ಡಯಾಲಿಸಿಸ್ ಪರಿಕರಗಳು ಹಾಗೂ ಮಾನವ ಸಂಪನ್ಮೂಲವನ್ನು ಒದಗಿಸಬೇಕಾಗಿರುತ್ತದೆ.
ಅಲ್ಲದೆ ಪ್ರತಿ ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿ 3 ಡಯಾಲಿಸಿಸ್ ಯಂತ್ರಗಳಿಗೆ ಪಾಳಿಯಲ್ಲಿ 1 ಟೆಕ್ನೀಷಿಯನ್, 1 ಶಶ್ರೂಷಕರು ಮತ್ತು 1 ಗ್ರೂಪ್ ಡಿ ನೌಕರರು ಹಾಗೂ 1 ವೈದ್ಯರು ಪ್ರತಿ ಡಯಾಲಿಸಿಸ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ ಸದಸರಿ ಪ್ರಮಾಣದಲ್ಲಿ ವೈದ್ಯರನ್ನು ನಿಯೋಜಿಸಿರುವುದಿಲ್ಲ ಎಂದು ಅವರು ಉತ್ತರಿಸಿದರು.