ರೈತರ ಅಸಮಾಧಾನ ಸ್ಫೋಟ

ಬೆಂಗಳೂರು ಸೆ.22 : ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ವಿರೋಧಿಸಿ ರೈತರು ರಾಜಧಾನಿಯಲ್ಲಿ ಬೀದಿಗಿಳಿದಿದ್ದು, ಸಾವಿರಾರು ಸಂಖ್ಯೆಯಲ್ಲಿ ರೈತರು ನಗರಕ್ಕೆ ಆಗಮಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದ ರೈತರು ಅಲ್ಲಿ ಸಮಾವೇಶಗೊಂಡಿದ್ದು, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಕೂಡ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಯೋಗೇಂದ್ರ ಯಾದವ್, ಕರ್ನಾಟಕ ವಿಧಾನಸಭೆ ಭೂ ಸುಧಾರಣೆ ಕಾನೂನು ತಿದ್ದುಪಡಿ ಮಾಡಲು ಹೊರಟಿದೆ, ಆದರೆ ಇದು ಭೂ ಸುಧಾರಣೆಗಾಗಿ ಮಾಡುತ್ತಿರುವ ತಿದ್ದುಪಡಿಯಲ್ಲ, ಬದಲಾಗಿ ಭೂಮಿಯನ್ನು ನಾಶಪಡಿಸಲು ಮಾಡುತ್ತಿರುವ ತಿದ್ದುಪಡಿ. ರೈತರು ಇಡೀ ದೇಶದಲ್ಲಿ ಎದ್ದು ನಿಂತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ರೈತ ಮಹಿಳೆ ಮಂಜುಳಾ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
