ಕೋಲಾಹಲ ಎಬ್ಬಿಸಿದ ವಿರೋಧ ಪಕ್ಷಗಳು

September 22, 2020

ನವದೆಹಲಿ ಸೆ.21 : ಟಿಎಂಸಿ ನಾಯಕ ಡೆರೆಕ್ ಒಬ್ರಿಯೆನ್ ಮತ್ತು ಎಎಪಿಯ ಸಂಜಯ್ ಸಿಂಗ್ ಸೇರಿದಂತೆ ಎಂಟು ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ವಿರೋಧ ಪಕ್ಷಗಳು ಇಂದು ಕೋಲಾಹಲ ಎಬ್ಬಿಸಿದ ಕಾರಣ ರಾಜ್ಯಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಕಲಾಪದ ವೇಳೆ ಇಂದು ಸಹ ವಿಪಕ್ಷಗಳು ಕೋಲಾಹಲ ಎಬ್ಬಿಸಿದ್ದರಿಂದ ಇಂದಿನ ಕಲಾಪವನ್ನು ಮುಂದೂಡಲಾಗಿದ್ದು ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳದೆ ಕಲಾಪ ವ್ಯರ್ಥವಾಯಿತು.
ಬೆಳಗ್ಗೆಯಿಂದ ನಾಲ್ಕು ಬಾರಿ ಕಲಾಪವನ್ನು ಮುಂದೂಡಿಕೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮೇಲ್ಮನೆ ಪುನರಾರಂಭವಾದಾಗಲೂ ವಿಪಕ್ಷಗಳ ಸದಸ್ಯರು ಕಲಾಪದಲ್ಲಿ ಕೋಲಾಹಲ ಎಬ್ಬಿಸಿದವು. ಆಗ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಸಂಸದರಾದ ಭುವನೇಶ್ವರ ಖಲಿತಾ ಅಮಾನತುಗೊಂಡಿರುವ ಸದಸ್ಯರನ್ನು ಸದನದಿಂದ ಹೊರ ನಡೆಯುವಂತೆ ಸೂಚಿಸಿದರು. ಸದನದಲ್ಲಿ ಕೋರಂ ಇರುವಂತೆ ನೋಡಿಕೊಳ್ಳಲು ಉಳಿದ ಸದಸ್ಯರಿಗೆ ತಿಳಿಸಿದರು. ಆದರೆ ಸದಸ್ಯರು ಹೊರ ನಡೆಯದಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.