ಗೋಧಿಯ ಬೆಂಬಲ ಬೆಲೆ 1,975

September 22, 2020

ನವದೆಹಲಿ ಸೆ.22 : ಕೃಷಿ ಬೆಳೆಯನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸಲು ಪ್ರತಿ ಕ್ವಿಂಟಾಲ್ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು 50 ರೂಪಾಯಿಯಿಂದ 1,975ಕ್ಕೆ ಸರ್ಕಾರ ಸೋಮವಾರ ಹೆಚ್ಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಮಹತ್ವದ ಎರಡು ಕೃಷಿ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡ ನಂತರ ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಮತ್ತು ರೈತ ಸಂಘಟನೆಗಳಿಂದ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿರುವ ಬೆನ್ನಲ್ಲೇ, ಸರ್ಕಾರ ಈ ಘೋಷಣೆಯನ್ನು ಪ್ರಕಟಿಸಿದೆ.
ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರ (ಪ್ರೋತ್ಸಾಹಕ ಸೌಲಭ್ಯ) ಮಸೂದೆ 2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020ನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ.