ಉದ್ಬವ ಗಂಗೆ ಪವಾಡ ಕ್ಷೇತ್ರ ಹಾಲುರಾಮೇಶ್ವರ ದೇವಾಲಯ

ಹಾಲುರಾಮೇಶ್ವರ ಕ್ಷೇತ್ರ’, ಕರ್ನಾಟಕ ರಾಜ್ಯ ದ, ಚಿತ್ರದುರ್ಗದಿಂದ ಸುಮಾರು ೫೦ ಕಿಮೀ ದೂರದಲ್ಲಿ, ಹೊಸದುರ್ಗ ತಾಲ್ಲೂಕಿನಲ್ಲಿರುವ ಪುಣ್ಯ ಕ್ಷೇತ್ರ, ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈ ತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಕೈಯಿಂದ ಪ್ರತಿಷ್ಠೆಯಾಗಿದೆ, ಎಂದು ಹೇಳಲಾದ ಶಿವಲಿಂಗ, ‘ಉದ್ಭವ ಮೂರ್ತಿ’ಎಂದು ಜನ ನಂಬುತ್ತಾರೆ. ದೇವಾಲಯದ ಮುಂದೆ ‘ನಂದಿ ಮೂರ್ತಿ’ಯನ್ನೂ ನಾವು ಕಾಣಬಹುದು. ‘ಗಂಗಾ ಕೊಳ’ ಇಲ್ಲಿಯ ವಿಶೇಷ. ಅಲ್ಲಿಗೆ ಹೋದ ಭಕ್ತರು ಮೊದಲು ಗಂಗಾಮಾತೆಗೆ ವಂದಿಸಿ, ಕೊಳದಲ್ಲಿ ಸ್ನಾನಮಾಡಿ, ತಮ್ಮ ಮನಸ್ಸಿನಲ್ಲಿ ಕೋರಿಕೊಳ್ಳುತ್ತಾರೆ.
“ಉದ್ಭವಗಂಗೆ” ಎಂದೇ ಕರೆಸಿಕೊಳ್ಳುವ ಪುಣ್ಯಸ್ಥಳವಾಗಿದ್ದು ಪ್ರತೀದಿನ ನೂರಾರು ಭಕ್ತಾಧಿಗಳು ಭೇಟಿನೀಡುತ್ತಾರೆ. ಮಕ್ಕಳಿಲ್ಲದವರು ಇಲ್ಲಿ ಭಗವಂತನಲ್ಲಿ ಹರಕೆ ಸಲ್ಲಿಸುತ್ತಾರೆ.
ಐತಿಹ್ಯ
ವಾಲ್ಮೀಕಿ ಮಹರ್ಷಿಗಳ ಪತ್ನಿ, ‘ಸುದತಿದೇವಿ’ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ, ಈ ಊರಿನ ಹುತ್ತದಲ್ಲಿ ದೊರಕಿದಾಗ ಅಲ್ಲಿ ಗಂಗೋದ್ಭವವೂ ಆಯಿತು ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು, ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆಯ ವಿಗ್ರಹ ಪ್ರತಿಷ್ಠಾಪಿಸಿ ‘ರಾಮೇಶ್ವರ’ದತ್ತ ಹೊರಟರು. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ, ‘ಹಾಲು ರಾಮೇಶ್ವರ’ ಎಂದು ನಾಮಕರಣ ಮಾಡಿದರು ಎನ್ನುತ್ತಾರೆ. ಅಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ, ‘ಸುದತಿದೇವಿ’ಯವರ ವಿಗ್ರಹವೂ ಇದೆ.
ಬಸ್ಸಿನ ವ್ಯವಸ್ಥೆ :
‘ಚಿತ್ರದುರ್ಗ’ ದಿಂದ ‘ತಾಳ್ಯ’ ದವರೆಗೆ ನೇರವಾದ ಬಸ್ ವ್ಯವಸ್ಥೆಯಿದೆ. ತಾಳ್ಯದಿಂದ ‘ಹಾಲುರಾಮೇಶ್ವರ’ ಬಹಳ ಸಮೀಪ. ಶಿವಮೊಗ್ಗ-ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿ ‘ಶಿವಗಂಗ’ಯಲ್ಲಿ ಇಳಿದು, ರಿಕ್ಷಾದಲ್ಲಿ ನೇರವಾಗಿ ಹೋಗಬಹುದು. ಖಾಸಗಿ ವಾಹನಗಳಲ್ಲಿಯೂ ನೂರಾರು ಭಕ್ತರು ಪ್ರತಿದಿನ ಬಂದು ಹೋಗುತ್ತಾರೆ. ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು.

