ಮಡಿಕೇರಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ‘ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ’

22/09/2020

ಮಡಿಕೇರಿ ಸೆ. 22 : ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ‘ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ’ ಕಾರ್ಯಕ್ರಮ ನಡೆಯಿತು.
ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡ್ರಗ್ಸ್‍ನಿಂದಾಗುವ ತೊಂದರೆ ಮತ್ತು ಸಮಾಜದ ಮೇಲೆ ಬಿರುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಕೊರೋನಾ ವೈರಸ್‍ನಿಂದ ಇಡೀ ವಿಶ್ವವೇ ಸ್ತಬ್ಧವಾಗಿದೆ. ಆದರೆ ಇದೀಗ ಡ್ರಗ್ಸ್ ದಂಧೆ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬಿರಲಿದೆ ಎಂದರು.
ಮಾದಕ ವಸ್ತುಗಳ ಜಾಲ ಚಿತ್ರರಂಗಮಾತ್ರವಲ್ಲ ಯುವ ಸಮೂಹವನ್ನು ಅಪ್ಪಿಕೊಂಡಿದೆ. ಆದ್ದರಿಂದ ಯುವಕರಲ್ಲಿ ಪೋಷಕರು ಹೆಚ್ಚು ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಬಹಳಷ್ಟು ಯುವಕರು ಡ್ರಗ್ಸ್‍ನಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಕರು ಇಂತಹ ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಬಿಜೆಪಿ ಕೃಷಿ ಮೋರ್ಚಾದ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಯುವಜನತೆ ದುಶ್ಚಟಗಳಿಗೆ ದಾಸರಾದರೆ ದೇಶವೇ ನಾಶವಾದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ದೇಶದ ಜವಾಬ್ದಾರಿ ಯುವ ಸಮೂಹದ ಮೇಲಿದ್ದು, ಇಂತಹ ದುಶ್ಚಟಗಳಿಗೆ ಪ್ರೇರಿತರಾಗದೆ, ಸಮಾಜದ ವಸ್ತವತೆಯನ್ನು ಅರಿತು ಹೊರಬರುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಯುವ ಮೋರ್ಚಾದ ನಗರ ಅಧ್ಯಕ್ಷ ನವೀನ್ ಪೂಜಾರಿ, ಪ್ರಮುಖರಾದ ದರ್ಶನ್ ಜೋಯಪ್ಪ, ಮನು ಮಂಜುನಾಥ್ ಮತ್ತು ಯುವ ಮೋರ್ಚಾ ಸದಸ್ಯರು ಹಾಜರಿದ್ದರು.