ಮಡಿಕೇರಿಯಲ್ಲಿ ಗ್ರಾ. ಪಂ. ನೌಕರರ ಪ್ರತಿಭಟನೆ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

22/09/2020

ಮಡಿಕೇರಿ ಸೆ. 22 : ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾ. ಪಂ. ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಮಾಯಿಸಿದ ನೌಕರರು ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಗ್ರಾ. ಪಂ. ನೌಕರರು ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವ ಸಂದರ್ಭ ಹಗಲಿರುಳು ದುಡಿದಿದ್ದಾರೆ. ಆದರೆ ಸರಕಾರ ನೌಕರರಿಗೆ ತೃಪ್ತಿಕರವಾದ ಸಂಬಳ ನೀಡದೆ ವಂಚಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಗ್ರಾ. ಪಂ.ಗಳಲ್ಲಿ ನೀರುಗಂಟಿ, ಸ್ವಚ್ಚತೆಗಾರರು, ಬಿಲ್ ಕಲೆಕ್ಟರ್‍ಗಳು, ಚಾಲಕರು, ಡಾಟಎಂಟ್ರಿ ಆಪರೇಟರ್ ಸೇರಿದಂತೆ ಇನ್ನಿತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಸುಮಾರು 60ಕ್ಕಿಂತ ಹೆಚ್ಚು ನೌಕರರಿಗೆ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದರು.
ಆದ್ದರಿಂದ 14ನೇ ಹಾಗೂ 15 ಹಣಕಾಸು ಆಯೋಗದ ಹಣದಲ್ಲಿ ಬಾಕಿ ಉಳಿದಿರುವ ಸಿಬ್ಬಂದಿ ವೇತನ ಪಾವತಿಸಬೇಕು, ನಿವೃತ್ತಿಯಾದವರಿಗೆ 15 ತಿಂಗಳು ಗ್ರಾಚ್ಯೂಟಿ ನೀಡಬೇಕು, ಇಎಫ್‍ಎಮ್‍ಎಸ್ ಬಾಕಿ ಉಳಿದ ಕಸಗೂಡಿಸುವ ಮತ್ತು ಪಂಪ್ ಆಪರೇಟರ್ ಹಾಗೂ ಇತರ ಸಿಬ್ಬಂದಿಗಳನ್ನು ಸರಕಾರದ ಆದೇಶದಂತೆ ಸೇರ್ಪಡೆ ಮಾಡಬೇಕು, 23.7.2019ರ ಆದೇಶದಂತೆ ಎಲ್ಲಾ ಸಿಬ್ಬಂದಿಗಳನ್ನು ಅನುಮೋದನೆ ಮಾಡಬೇಕು, ಸೇವಾ ಪುಸ್ತಕ ತೆರೆಯಬೇಕು, ಪಂಪ್ ಆಪರೇಟರ್‍ಗಳಿಗೆ ಕರವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.
ಕಾನೂನು ಬಾಹಿರವಾಗಿ ಅಕ್ರಮ ನೇಮಕಾತಿ ರದ್ದು ಮಾಡಬೇಕು, ಬಿಲ್‍ಕಲೆಕ್ಟರ್ ರಿಂದ ಗ್ರೇಡ್-2, ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು, ಸರಕಾರಿ ಆದೇಶಗಳನ್ನು ಜಾರಿ ಮಾಡಿದ ಪಿಡಿಓ ಗಳ ಮೇಲೆ ಸೂಕ್ತ ಕ್ರಮ ವಹಿಸಬೇಕು, ಕಂಪ್ಯೂಟರ್ ಆಪರೇಟರ್ ಕೋಟಾ ಶೇ. 70 ರಿಂದ 100ಕ್ಕೆ ಹೆಚ್ಚಿಸಬೇಕು, ಲೆಕ್ಕ ಸಹಾಯಕ ಕೋಟಾ ಶೇ. 30 ರಿಂದ 100ಕ್ಕೆ ಹೆಚ್ಚಿಸಬೇಕು, ನಿವೃತ್ತ ಸಿಬ್ಬಂದಿಗಳಿಗೆ ಪೆನ್ಷನ್ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾ. ಪಂ. ನೌಕರರು ಪಾಲ್ಗೊಂಡಿದ್ದರು.