ಅರಣ್ಯ ಹಕ್ಕು ಕಾಯ್ದೆ : ತಿರಸ್ಕೃತಗೊಂಡ ಅರ್ಜಿ ಮರುಪರಿಶೀಲಿಸಿ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ ಸೆ.22 : ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ಮರು ಪರಿಶೀಲನೆಗೆ ಬಾಕಿ ಇರುವ 1872 ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಗ್ರಾ.ಪಂ.ಅರಣ್ಯ ಹಕ್ಕು ಸಮಿತಿ) ಮರು ಪರಿಶೀಲಿಸಿ ಅಕ್ಟೋಬರ್, 07 ರೊಳಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮಸ್ಯೆ ಪರಿಹಾರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಹಲವು ತಿಂಗಳಿನಿಂದ ಅರಣ್ಯ ವಾಸಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಸಂಬಂಧ ತಿರಸ್ಕøತಗೊಂಡಿರುವ ಅರಣ್ಯ ಹಕ್ಕುಪತ್ರ ಅರ್ಜಿಗಳನ್ನು ಮರು ಪರಿಶೀಲಿಸಿ ಅಕ್ಟೋಬರ್, 07 ರೊಳಗೆ ಉಪ ವಿಭಾಗ ಮಟ್ಟಕ್ಕೆ ವರದಿ ನೀಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ 12 ಗ್ರಾ.ಪಂ.ವ್ಯಾಪ್ತಿಯಲ್ಲಿ 746, ವಿರಾಜಪೇಟೆ ತಾಲ್ಲೂಕಿನ 15 ಗ್ರಾ.ಪಂ.ಗಳಲ್ಲಿ 811 ಮತ್ತು ಸೋಮವಾರಪೇಟೆ ತಾಲ್ಲೂಕಿನ 10 ಗ್ರಾ.ಪಂ. ವ್ಯಾಪ್ತಿಯಲ್ಲಿ 315 ಒಟ್ಟು 1872 ಅರ್ಜಿಗಳು ತಿರಸ್ಕøತಗೊಂಡಿದ್ದು, ಈ ಅರ್ಜಿಗಳನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಮರು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ಸುಪ್ರಿಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದು, ತಿರಸ್ಕøತಗೊಂಡಿರುವ ಅರ್ಜಿಗಳನ್ನು ಕೂಡಲೇ ಸಮಿತಿ ಸಭೆ ನಡೆಸಿ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ವೈಯಕ್ತಿಕ ಅರಣ್ಯ ಹಕ್ಕು ಪತ್ರಗಳು ತಿರಸ್ಕøತಗೊಳ್ಳಲು ಕಾರಣವೇನು, ತಿರಸ್ಕøತಗೊಂಡ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಲು ಇದುವರೆಗೆ ಏಕೆ ಆಗಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಮಾಹಿತಿ ನೀಡಿ ಅರಣ್ಯ ಹಕ್ಕು ಪತ್ರ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1872 ಅರ್ಜಿಗಳು ತಿರಸ್ಕøತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಸೌಲಭ್ಯ ಕಲ್ಪಿಸಬೇಕಿದೆ ಎಂದು ಅವರು ಕೋರಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 1739 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಇದರಲ್ಲಿ 1300 ಅರ್ಜಿಗಳಿಗೆ ಆರ್‍ಟಿಸಿ ನೀಡಲು ಸಾಧ್ಯವಾಗಿದೆ. ಉಳಿದ ಅರ್ಜಿಗಳಿಗೆ ಆರ್‍ಟಿಸಿ ನೀಡಲು ಸಾಧ್ಯವಾಗಿಲ್ಲ ಎಂದು ಐಟಿಡಿಪಿ ಅಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ತಿರಸ್ಕøತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ವರದಿ ನೀಡಬೇಕು. ಅರ್ಹರಿಗೆ ಸೌಲಭ್ಯಗಳು ತಲುಪಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಸಮುದಾಯ ಹಕ್ಕುಗಳಲ್ಲಿ 45 ಅರ್ಜಿಗಳಲ್ಲಿ 12 ಅರ್ಜಿಗಳಿಗೆ ಹಕ್ಕು ಪತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು.
ತಿತಿಮತಿ ವ್ಯಾಪ್ತಿಯ ಚೈನಿಹೆಡ್ಲು, ನಾಗರಹೊಳೆ ವ್ಯಾಪ್ತಿಯ ಕೊಡಂಗೇರಿ, ಮಾಲ್ದಾರೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಆಶ್ರಮ ಶಾಲೆ, ಮನೆ ನಿರ್ಮಾಣ ಮತ್ತಿತರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಬೇಕಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಗಿರಿಜನ ಹಾಡಿಗಳಲ್ಲಿ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಹಕರಿಸಬೇಕಿದೆ ಎಂದು ಶಿವಕುಮಾರ್ ಅವರು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಕಂಡು, ಡಿಎಫ್‍ಒ ಚಕ್ರಪಾಣಿ, ನಿಲೇಶ್ ಶಿಂಧೆ, ತಾ.ಪಂ. ಇಒ ಷಣ್ಮುಗಂ, ಐಟಿಡಿಪಿ ಇಲಾಖೆ ವ್ಯವಸ್ಥಾಪಕರಾದ ದೇವರಾಜು, ರಂಗನಾಥ್, ಎಸಿಎಫ್‍ಗಳಾದ ಅಂತೋಣಿ, ಪಿಡಿಒ ಸುನಿತಾ, ವಲಯ ಅರಣ್ಯಾಧಿಕಾರಿಗಳು ನೆಹರು, ಶ್ರೀಪತಿ, ಇತರರು ಇದ್ದರು.



