ಸದಾಶಿವ ಆಯೋಗ ಜಾರಿಗೆ ವಿರೋಧ : ಭೋವಿ ಸಮಾಜದಿಂದ ಶಾಸಕರಿಗೆ ಮನವಿ ಸಲ್ಲಿಕೆ

22/09/2020

ಸೋಮವಾರಪೇಟೆ ಸೆ. 22 : ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಅನುಷ್ಠಾನಗೊಳಿಸಬಾರದು. ಈಗಿರುವ ಮೀಸಲಾತಿಯನ್ನೇ ಮುಂದುವರೆಸಲು ಕ್ರಮ ಕೈಗೊಳ್ಳಬೇಕೆಂದು ಭೋವಿ ಸಮಾಜದ ಪ್ರಮುಖರು, ಶಾಸಕ ಅಪ್ಪಚ್ಚು ರಂಜನ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸುಂಟಿಕೊಪ್ಪದಲ್ಲಿ ಶಾಸಕರನ್ನು ಭೇಟಿ ಮಾಡಿದ ಸಮಾಜದ ಮುಖಂಡರು, ನ್ಯಾ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಈಗಿರುವ ಮೀಸಲಾತಿಯನ್ನೇ ಮುಂದುವರೆಸಬೇಕು. ಆಯೋಗದ ವರದಿಯನ್ನು ತಕ್ಷಣ ತಿರಸ್ಕರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸುಜಿತ್, ಗೌರವಾಧ್ಯಕ್ಷ ಆರ್.ಸಿ. ವಿಜಯ್, ತಾಲೂಕು ಅಧ್ಯಕ್ಷ ಎಂ.ಕೆ. ಸುಬ್ರಮಣಿ, ಪ್ರಮುಖರಾದ ಅಣ್ಣಪ್ಪ, ಆರ್.ಸಿ. ಗಣೇಶ್, ರೇಣು, ಎಂ. ವಿಜಯ, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.