ಮರಗೋಡಿನಲ್ಲಿ ಕ.ಸಾ.ಪ ದಿಂದ ಪ್ರತಿಭಾ ಪುರಸ್ಕಾರ ಮತ್ತು ದತ್ತಿ ನಿಧಿ ಕಾರ್ಯಕ್ರಮ

22/09/2020

ಮಡಿಕೇರಿ ಸೆ.22 : ಕನ್ನಡ ಭಾಷೆಯು ಸಂಸ್ಕøತ ಹಾಗೂ ತಮಿಳಿನ ಬಳಿಕ ಅತ್ಯಂತ ಹಳೆಯ ಭಾಷೆಯಾಗಿ ಗುರುತಿಸಲ್ಪಟ್ಟಿದ್ದು ಅದರ ಪ್ರಾಚೀನತೆ ಹಾಗೂ ನಾಡಿನೊಂದಿಗಿನ ನಂಟನ್ನು ಅರಿತು ಯುವ ಸಮೂಹವು ಭಾಷಾಭಿಮಾನ ಮೂಡಿಸಿಕೊಳ್ಳಬೇಕಿದೆ ಎಂದು ಮರಗೋಡು ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಎಸ್.ರವಿಕೃಷ್ಣ ಕರೆ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂರ್ನಾಡು ಹೋಬಳಿ ಕ.ಸಾ.ಪ ಘಟಕದ ವತಿಯಿಂದ ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಮತ್ತು ಮಹಾಬಲೇಶ್ವರ ಭಟ್ ದತ್ತಿನಿಧಿ ಕಾರ್ಯಕ್ರಮದಲ್ಲಿ ಕನ್ನಡದ ಏಳು ಬೀಳುಗಳ ಸಮೀಕ್ಷೆ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದಲ್ಲಿ ದೊರೆತ ಕ್ರಿ.ಶ.370 ರ ಶಾಸನವು ಕನ್ನಡದ ಮೊದಲ ಶಾಸನವೆಂದು ಗುರುತಿಸಲ್ಪಟ್ಟಿದೆ. ಇದರಿಂದ ಈ ರಚನೆಗೂ ಸುಮಾರು 200 ವರ್ಷಗಳಷ್ಟು ಮೊದಲೇ ಕನ್ನಡ ಭಾಷೆ ರೂಪುಗೊಂಡಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆ ಬಳಿಕದ 2000 ವರ್ಷಗಳಲ್ಲಿ ಕನ್ನಡವು ಹಲವು ಮಜಲುಗಳನ್ನು ದಾಟಿ ಬಂದಿದ್ದು ನಮ್ಮ ಪೂರ್ವಜರ ಉಸಿರಿನೊಡನೆ ಬೆರೆತು ಬೆಳೆದಿದೆ. ನಾಡಿನ ಸಂಸ್ಕøತಿ, ಕಲೆ, ಗೀತೆ, ಧರ್ಮ ಎಲ್ಲವೂ ಈ ಕನ್ನಡದ ಬೇರಿನಿಂದಲೇ ರೂಪುಗೊಂಡಿದೆ ಎಂಬುದನ್ನು ನೆನಪಿಟ್ಟು ಸಾಗಿದರೆ ಒಳಿತು ಎಂದು ಹೇಳಿದರು.
ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅವರು ಮಾತನಾಡಿ ಈಗಿನ ಜನಮಾನಸದಲ್ಲಿ ದುಡ್ಡೇ ಸಂತೋಷ ಎಂಬ ಭಾವನೆ ಬೇರೂರಿದೆ. ಆದರೆ ಮಾತೃಭಾಷೆಯನ್ನು ಪ್ರೀತಿಸುವುದರಿಂದ, ಕತೆ, ಕವನ, ಸಾಹಿತ್ಯ ರಚನೆ ಮಾಡುವುದರಿಂದ ಮನಸ್ಸು ಪ್ರಪುಲ್ಲಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ ಕನ್ನಡಾಭಿಮಾನಕ್ಕೆ ಒತ್ತುಕೊಡುವ ಉದ್ದೇಶದಿಂದ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 18 ವಿದ್ಯಾರ್ಥಿಗಳು 125 ಅಂಕಗಳಿಸಿ ಸಾಧನೆ ಮಾಡಿದ್ದಾರೆ. ಕೊಡಗು ಕ.ಸಾ.ಪ ಕಾರ್ಯಕ್ರಮಗಳು ರಾಜ್ಯಮಟ್ಟದಲ್ಲೇ ಮಾದರಿಯಾಗಿ ಗುರುತಿಸಿಕೊಂಡಿದೆ. ನಮ್ಮಲ್ಲಿ ಶ್ರೇಷ್ಠ ಸಾಹಿತಿಗಳಿದ್ದಾರೆ ಎಂಬುದಕ್ಕೆ ಕಿಗ್ಗಾಲು ಗಿರೀಶ್ ರವರ ಪದ್ಯವನ್ನು ಮಹಾರಾಷ್ಟ್ರ ಸರ್ಕಾರವು ಅಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯವಾಗಿ ನಿಗದಿಪಡಿಸಿರುವುದೇ ಸಾಕ್ಷಿ. ನಮ್ಮ ದೇಶ ಮುಂದುವರೆಯಲು ಪಟ್ಟಣವಾಸ, ಇಂಗ್ಗೀಷ್ ಬಳಕೆ ಅನಿವಾರ್ಯವಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋಬಳಿ ವ್ಯಾಪ್ತಿಯಲ್ಲಿ ಸಾಧನೆಯನ್ನು ಮಾಡಿದ 17 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಕಟ್ಟೆಮನೆ ಸೋನಜಿತ್ ಉದ್ಘಾಟಿಸಿದರು. ಮೂರ್ನಾಡು ಹೋಬಳಿ ಕ.ಸಾ.ಪ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಸಾಹಿತಿ ಐಮಂಡ ಜಗದೀಶ್ ಪುರಸ್ಕಾರದ ಪ್ರಾಯೋಜಕತ್ವವನ್ನು ವಹಿಸಿದ್ದರು. ಶಿಕ್ಷಕರಾದ ಕೆ.ಶಿವಪ್ರಸಾದ ಸ್ವಾಗತಿಸಿದರು. ಬಿ.ಬಿ.ಪೂರ್ಣಿಮ ನಿರೂಪಿಸಿದರು. ಡಿ.ರಮೇಶ್ ನಾಯ್ಕ ವಂದಿಸಿದರು.