ಗಾಳಿ ಮಳೆಯಿಂದ ಮನೆಗಳಿಗೆ ಹಾನಿ : ಸೋಮವಾರಪೇಟೆಯಲ್ಲಿ ಘಟನೆ

22/09/2020

ಸೋಮವಾರಪೇಟೆ ಸೆ.22 : ಭಾರೀ ಮಳೆಗೆ ಕಲ್ಲಂದೂರು ಗ್ರಾಮದ ಅಬ್ಬಾಸ್ ಎಂಬವರ ಮನೆಯ ಗೋಡೆ ಕುಸಿದು ನಷ್ಟವಾಗಿದೆ.
ಬೆಳಿಗ್ಗಿನ ಜಾವ 4 ಗಂಟೆಗೆ ದುರ್ಘಟನೆ ನಡೆದಿದ್ದು, ಗಾಳಿಮಳೆಗೆ ಎಚ್ಚರವಾಗಿದ್ದ ಕುಟುಂಬ ಗೋಡೆ ಬೀಳುವ ಶಬ್ದವನ್ನು ಕೇಳಿ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ. ಪೋಷಕರೊಂದಿಗೆ ಎರಡು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ವಾಸದ ಮನೆಯ ಅರ್ಧಭಾಗ ಕುಸಿದಿದ್ದು, ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ತೆರಳಿ, ನಷ್ಟದ ಮಾಹಿತಿ ಸಂಗ್ರಹಿಸಿದ್ದಾರೆ.
ತೋಳೂರುಶೆಟ್ಟಳ್ಳಿ ಟಿ.ಎಂ.ಸುರೇಶ್ ಎಂಬವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ತೋಳೂರುಶೆಟ್ಟಳ್ಳಿ, ಕೂತಿ, ಕೊತ್ನಳ್ಳಿ, ಕುಡಿಗಾಣ ಗ್ರಾಮಗಳಲ್ಲಿ ಕೊಲ್ಲಿಗಳಲ್ಲಿ ನೀರು ತುಂಬಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಪೈರಿನ ಮೇಲೆ ಮರಳು ಮಣ್ಣು ಶೇಖರಣೆ ಆಗಿದೆ ಎಂದು ಕೃಷಿಕರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 52ಮಿ.ಮೀಟರ್, ಸೋಮವಾರಪೇಟೆ ಕಸಬಾ 36.2, ಶನಿವಾರಸಂತೆ 23.8, ಕೊಡ್ಲಿಪೇಟೆ 39, ಸುಂಠಿಕೊಪ್ಪ 28.2, ಕುಶಾಲನಗರ 6.4ಮಿ.ಮೀ ಮಳೆಯಾಗಿದೆ.