DRUGS ದಂಧೆ : ದಕ್ಷಿಣ ಆಫ್ರಿಕಾದ ವ್ಯಕ್ತಿಯ ಬಂಧನ : ಕೊಡಗು ಪೊಲೀಸರ ಯಶಸ್ವೀ ಕಾರ್ಯಾಚರಣೆ

22/09/2020

ಮಡಿಕೇರಿ ಸೆ.22 : ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಯತ್ನಕ್ಕೆ ಸಂಬಂಧಿಸಿದಂತೆ ಕೊಡಗಿನಿಂದ ತಲೆ ಮರೆಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ವ್ಯಕ್ತಿಯನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ದಕ್ಷಿಣ ಆಫ್ರಿಕಾದ ಓಪೋಂಗ್ ಸ್ಯಾಮ್ ಸ್ಯನ್ (29 ವರ್ಷ) ಬಂಧಿತ ಆರೋಪಿ.
ಜಿಲ್ಲೆಯ ಕೆಲವು ವ್ಯಕ್ತಿಗಳಿಗೆ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀದರು ಇದೇ ಆ.28 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ರಾಜಾಸೀಟ್ ಮುಖ್ಯ ರಸ್ತೆಯಲ್ಲಿ ಮಾಲು ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಸಂದರ್ಭ ಕೆಲವು ಆರೋಪಿಗಳು ಕಾರು ಸಹಿತ ಪರಾರಿಯಾಗಿದ್ದರು. ಪ್ರಕರಣದಲ್ಲಿ ಬೆಂಗಳೂರು, ಕೊಲ್ಕೋತ್ತಾ, ಕೇರಳ ರಾಜ್ಯ ಹಾಗೂ ವಿದೇಶಿ ಪ್ರಜೆಯೂ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಡಿಸಿಐಬಿ ನಿರೀಕ್ಷಕರ ತಂಡಕ್ಕೆ ಆದೇಶ ನೀಡಿದ್ದರು.
ಪೊಲೀಸರ ವಿಶೇಷ ತಂಡ ಸೆ.14 ರಂದು ಬೆಂಗಳೂರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇಂದು ವಿದೇಶಿ ಪ್ರಜೆಯನ್ನು ಬೆಂಗಳೂರಿನ ಹೊರಮಾವಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಎಸ್‍ಪಿ ಕ್ಷಮಾಮಿಶ್ರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ, ಸಬ್ ಇನ್ಸ್ ಪೆಕ್ಟರ್ ಎಚ್.ಬಿ.ಚಂದ್ರಶೇಖರ್, ಸಿಬ್ಬಂದಿಗಳಾದ ಎಎಸ್.ಐ ಹಮೀದ್, ಬಿ.ಎಲ್.ಯೋಗೇಶ್ ಕುಮಾರ್, ಸುರೇಶ್, ಸಜಿ, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್. ಶರತ್ ರೈ, ಹಾಗೂ ಚಾಲಕ ಶಶಿಕುಮಾರ್ ಮತ್ತು ಸಿಡಿಆರ್ ಸೆಲ್ ನ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಡಿಸಿಐಬಿ ತಂಡ ಯಶಸ್ವೀ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ಬಹುಮಾನ ಘೋಷಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಹಸ್ಯವಾಗಿ ಮಾಹಿತಿ ನೀಡಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸಹಕರಿಸುವಂತೆ ಕ್ಷಮಾಮಿಶ್ರಾ ಮನವಿ ಮಾಡಿದ್ದಾರೆ.