ವನ್ಯಜೀವಿ ದಾಳಿಯಿಂದ ಜೀವಹಾನಿ : ಮಾಹಿತಿ ಪಡೆದ ವೀಣಾ ಅಚ್ಚಯ್ಯ

23/09/2020

ಮಡಿಕೇರಿ ಸೆ.22 : ಬೆಂಗಳೂರಿನಲ್ಲಿ ಆರಂಭಗೊಂಡಿರುವ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಭಾಗವಹಿಸಿ 2019-20 ಹಾಗೂ 2020-21 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಜೀವಹಾನಿಯ ಪ್ರಕರಣಗಳು ಎಷ್ಟು ? ಹಾಗೂ ಪ್ರಕರಣದ ಸಂಪೂರ್ಣ ವಿವರ ನೀಡುವಂತೆ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು 2019-20 ನೇ ಸಾಲಿನಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದಲ್ಲ್ಲಿ 2019 ರ ಮೇ 3 ರಂದು ವಿರಾಜಪೇಟೆ ತಾಲೂಕಿನ ಕಾಯಿಮನೆ ಗ್ರಾಮದ ಸುಧಾ ಕುಟ್ಟಪ್ಪ, 2019 ರ ನವೆಂಬರ್ 21 ರಂದು ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಕರಿಯ, ವಿರಾಜಪೇಟೆ ವಿಭಾಗದಲ್ಲಿ 2019 ರ ಆಗಸ್ಟ್ 8 ರಂದು ತಿತಿಮತಿ ವಲಯದ ಚೆನ್ನಯ್ಯನ ಕೋಟೆ ಗ್ರಾಮದ ಮುರುಡಯ್ಯ, 2020 ರ ಮಾರ್ಚ್ 28 ರಂದು ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು, ಮಡಿಕೇರಿ ವಿಭಾಗದಲ್ಲಿ 2019 ರ ಸೆಪ್ಟಂಬರ್ 06 ರಂದು ಕಡಗದಾಳು ಗ್ರಾಮದ ಚೆನ್ನಕೇಶವ ಮತ್ತು 2020 ರ ಫೆಬ್ರವರಿ 07 ರಂದು ಕುಶಾಲನಗರ ವಲಯದ ಕರಡಿಗೋಡು ಗ್ರಾಮದ ಪೆಮ್ಮಯ್ಯ ಅವರ ಜೀವಹಾನಿಯಾಗಿರುತ್ತದೆ.

2020-21 ನೇ ಸಾಲಿನಲ್ಲಿ ಆಗಸ್ಟ್ ಅಂತ್ಯದವರೆಗೆ ಮಡಿಕೇರಿ ವಿಭಾಗದಲ್ಲಿ 2020 ರ ಏಪ್ರಿಲ್ 11 ರಂದು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಎಂ.ಸಿ.ಲೋಕೇಶ್, 2020ರ ಜೂನ್ 15 ರಂದು ಮಡಿಕೇರಿಯ ಯವಕಪಾಡಿ ಗ್ರಾಮ ಕುಡಿಯರ ಚಿಣ್ಣಪ್ಪ, 2020 ರ ಆಗಸ್ಟ್ 15 ರಂದು ಸೋಮವಾರಪೇಟೆ ಮೊದೂರು ಗ್ರಾಮದ ನೀನಾ ಮುತ್ತಣ್ಣ, ವಿರಾಜಪೇಟೆ ವಿಭಾಗದಲ್ಲಿ 2020 ರ ಜುಲೈ 04 ರಂದು ವಿರಾಜಪೇಟೆ ಬೈಗೋಡು ಕೋಳಿತೋಡುವಿನ ಮಾದ, 2020 ರ ಮೇ 25 ರಂದು ನಾಗರಹೊಳೆ ವಿಭಾಗದ ನೇರಳೆ ಕುಪ್ಪೆ ಹಾಡಿಯ ಜಗದೀಶ್ ಅವರು ಕಾಡು ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿರುತ್ತಾರೆ ಎಂದು ಸಚಿವರು ಉತ್ತರಿಸಿದರು.

ಈ ವೇಳೆ ಪ್ರಶ್ನಿಸಿದ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಈ ಪ್ರಕರಣಗಳಲ್ಲಿ ಮೃತರಾದ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರದಿಂದ ದೊರೆತಿರುವ ಪರಿಹಾರಗಳೇನು ಎಂದು ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಸಚಿವರು ವನ್ಯ ಪ್ರಾಣಿ ದಾಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಲ್ಲಿ ಸರ್ಕಾರದ ಆದೇಶದ ಅನ್ವಯ 5 ಲಕ್ಷ ರೂ.ಗಳನ್ನು ವಾರಸುದಾರರಿಗೆ ಒದಗಿಸಲಾಗಿರುತ್ತದೆ ಎಂದು ಅವರು ಹೇಳಿದರು. ಅಲ್ಲದೆ ಸರ್ಕಾರದ ಆದೇಶದನ್ವಯ 2020 ರ ಜನವರಿ 07 ರನ್ವಯ ವನ್ಯಪ್ರಾಣಿಗಳಿಂದ ಮೃತಪಟ್ಟಿರುವ ವ್ಯಕ್ತಿಯ ವಾರಸುದಾರರಿಗೆ ಈಗಾಗಲೇ ಪಾವತಿಸಲಾಗುತ್ತಿದ್ದ 5 ಲಕ್ಷ ರೂ.ಗಳ ದಯಾತ್ಮಕ ಧನವನ್ನು 7,50,000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಅದರಂತೆ ನಿಯಮಾನುಸಾರ ಪರಿಶೀಲಿಸಿ ವಿತರಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಅಲ್ಲದೆ ಸರ್ಕಾರದ ಆದೇಶದನ್ವಯ ಮೃತರ ಕುಟುಂಬದ ವಾರಸುದಾರರಿಗೆ 05 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನವನ್ನು ಸಹ ನೀಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.

ಈ ಸಂದರ್ಭ ಮಾತನಾಡಿದ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು, ಈ ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ಅನಾವಶ್ಯಕ ವಿಳಂಬ ಆಗಿದೆಯೇ ? ಆಗಿದ್ದಲ್ಲಿ ಈ ವಿಳಂಬಕ್ಕೆ ಕಾರಣಗಳೇನು ಎಂದು ಅವರು ಪ್ರಶ್ನಿಸಿದರು.

ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು ವಿರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು ಎಂಬುವವರು 2020ರ ಮಾರ್ಚ್, 28 ರಂದು ಕಾಡೆಮ್ಮೆ ದಾಳಿಯಿಂದ ಮೃತಪಟ್ಟಿರುವ ಪ್ರಕರಣದಲ್ಲಿ ಮೃತ ವ್ಯಕ್ತಿಯ ವಾರಸುದಾರರಿಗೆ ದಯಾತ್ಮ ಧನ ಪಾವತಿಸುವ ಬಗ್ಗೆ ಗೊಂದಲವಿರುವ ಕಾರಣ ಕೆಲವೊಂದು ದಾಖಲಾತಿಗಳನ್ನು ಒದಗಿಸುವಂತೆ ಕೋರಿದ್ದು, ದಾಖಲಾತಿಗಳು ಸ್ವೀಕೃತವಾದ ಕೂಡಲೇ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ಇದರೊಂದಿಗೆ ವಿರಾಜಪೇಟೆ ವಿಭಾಗದ ವಿರಾಜಪೇಟೆ ವಲಯ ಕೊಳತ್ತೋಡು ಬೈಗೋಡು ಗ್ರಾಮದ ಮಾದ ಅವರು 2020 ರ ಜುಲೈ 04 ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ನಿಯಮಾನುಸಾರ ದಯಾತ್ಮಕ ಧನವನ್ನು ಖಜಾನೆ-2 ತಂತ್ರಾಂಶದ ಮೂಲಕ ಬಿಲ್ ತಯಾರಿಸಿ ಬ್ಯಾಂಕ್ ಖಾತೆಗೆ ಪಾವತಿಸಬೇಕಾಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರು ಕೂಲಿ ಕಾರ್ಮಿಕರಾಗಿದ್ದು ಇವರಿಗೆ ಆಧಾರ್ ಕಾರ್ಡ್ ಹಾಗೂ ಯಾವುದೇ ಬ್ಯಾಂಕ್ ಖಾತೆ ಇಲ್ಲದ ಕಾರಣ ಪ್ರಸ್ತುತ ದಯಾತ್ಮಕ ಧನ ಪಾವತಿಸುವುದು ಬಾಕಿ ಇರುತ್ತದೆ. ಈ ಎರಡು ಪ್ರಕರಣಗಳನ್ನು ಹೊರತುಪಡಿಸಿ ಇನ್ನಿತರ ಪ್ರಕರಣಗಳಲ್ಲಿ ಕೂಡಲೇ ಪರಿಹಾರ ಪಾವತಿ ಮಾಡಲಾಗಿರುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಉತ್ತರಿಸಿದರು.

ಈ ವೇಳೆ ಪರಿಷತ್ ಸದಸ್ಯರಾದ ವೀಣಾ ಅಚ್ಚಯ ಅವರು 2019-20ನೇ ಸಾಲಿಗೆ ಕೊಡಗು ಜಿಲ್ಲೆಗೆ ಒದಗಿಸಿರುವ ಒಟ್ಟು ಅನುದಾನವೆಷ್ಟು ಎಂದು ಪ್ರಶ್ನಿಸಿದರು.

ಅರಣ್ಯ ಪರಿಸರ ಮತ್ತು ಜೀವಿಶಾಸ್ರ್ತ ಸಚಿವರಾದ ಆನಂದ್ ಸಿಂಗ್ ಅವರು ಉತ್ತರಿಸಿ 2019-2020ನೇ ಸಾಲಿಗೆ ಕೊಡಗು ಜಿಲ್ಲೆಗೆ ರೂ.28.549 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಉತ್ತರಿಸಿದರು.

ಬಳಿಕ ಈ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರಗಳು ಮತ್ತು ಪ್ರತಿ ಕಾಮಗಾರಿಯ ಅಂದಾಜು ಮೊತ್ತ ಪ್ರಗತಿಯ ಹಂತ, ವಿನಿಯೋಗಿಸಿರುವ ಮೊತ್ತ ಹಾಗೂ ಕಾಮಗಾರಿಯ ಉದ್ದೇಶಗಳ ಸಂಪೂರ್ಣ ವಿವರ ನೀಡುವಂತೆ ವೀಣಾ ಅಚ್ಚಯ್ಯ ಅವರು ಕೇಳಿದರು.

ಈ ಕಾಮಗಾರಿಗಳಲ್ಲಿ ಭೂಕುಸಿತ ತಡೆಯಲು ನೆರವಾಗುವ ಕಾಮಗಾರಿಗಳನ್ನು ಆಧ್ಯತೆ ಮೇರೆಗೆ ತೆಗೆದುಕೊಳ್ಳಲಾಗಿದೆಯೇ ಇದ್ದಲ್ಲಿ ಸಂಪೂರ್ಣ ವಿವರ ನೀಡಬೇಕು ಎಂದು ವೀಣಾ ಅಚ್ಚಯ್ಯ ಅವರು ಕೇಳಿದರು.

ಇದಕ್ಕೆ ಉತ್ತರಿಸಿದ ಸಚಿವರಾದ ಆನಂದ್ ಸಿಂಗ್ ಅವರು ಅರಣ್ಯ ಇಲಾಖೆಯಿಂದ ಪ್ರಮುಖವಾಗಿ ಅರಣ್ಯೀಕರಣ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದ್ದು, ಭುಕುಸಿತ ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಯಾವುದೇ ಕಾಮಗಾರಿ ಕೈಗೊಳ್ಳಲಾಗಿರುವುದಿಲ್ಲ ಎಂದು ಉತ್ತರಿಸಿದರು.

ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾರಂಭವಾಗಿ ಎಷ್ಟು ವರ್ಷಗಳು ಕಳೆದಿವೆ ಎಂದು ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದರು.

ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಉತ್ತರಿಸಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು 2018ರಲ್ಲಿ ಪ್ರಾರಂಭಿಸಿಲಾಗಿದ್ದು, 4 ವರ್ಷಗಳು ಪೂರ್ಣಗೊಂಡಿರುತ್ತದೆ ಎಂದು ಹೇಳಿದರು.

ವೀಣಾ ಅಚ್ಚಯ್ಯನವರು ಈ ಸಂಸ್ಥೆಯಲ್ಲಿ ಇಂದಿಗೂ ಮೂಲ ಸೌಲಭ್ಯಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಕೇಳಿದರು.

ಸಚಿವರು ಉತ್ತರಿಸಿ ಶೈಕ್ಷಣಿಕ ವರ್ಷದಲ್ಲಿ ದಾಖಲಾಗುವ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಎಂ.ಸಿ.ಐ ನಿಯಮಾವಳಿಗಳನ್ವಯ ಅವಶ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಹಾಗೂ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿರತ್ತದೆ ಹಾಗೂ ಈ ಕಟ್ಟಡಗಳ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ ಎಂದು ಉತ್ತರಿಸಿದರು.

ನಂತರ ವೀಣಾ ಅಚ್ಚಯ್ಯನವರು ಈ ರೀತಿ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಳಂಬವಾಗಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುವುದಿಲ್ಲವೇ ಹಾಗೂ ಮೂಲ ಸೌಲಭ್ಯಗಳನ್ನು ಕೂಡಲೇ ಒದಗಿಸಿ ಸಂಸ್ಥೆಯು ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು ಅನುವಾಗುವಂತೆ ಸರ್ಕಾರ ಈ ಕೂಡಲೇ ಕ್ರಮ ವಹಿಸುವುದೇ ಎಂದು ಪ್ರಶ್ನಿಸಿದರು.

ಎಂ.ಸಿ.ಐ ನಿಯಮಾವಳಿಗಳನ್ವಯ ಅವಶ್ಯವಿರುವ ಮೂಲ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲು ಕ್ರಮ ವಹಿಸುತ್ತಿರುವುದರಿಂದ, ಶೈಕ್ಷಣಿಕ ಗುಣಮಟ್ಟದಲ್ಲಿ ಯಾವುದೇ ಹಿನ್ನೆಡೆಯಾಗಿರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಉತ್ತರಿಸಿದರು.