10 ಕ್ಕೂ ಹೆಚ್ಚು ವಿಧೇಯಕ ಮಂಡನೆ

23/09/2020

ಬೆಂಗಳೂರು ಸೆ.23 : ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಭಾರತ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು ನೀಡಿರುವ ವರದಿಗಳು, ಧನ ವಿನಿಯೋಗ ಹಾಗೂ ಹಣಕಾಸು ಲೆಕ್ಕಗಳ ಪರಿಶೋಧನಾ ವರದಿಗಳು, ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಲೆಕ್ಕ ಪರಿಶೋಧನಾ ವರದಿ ಸೇರಿದಂತೆ ವಿವಿಧ ವರದಿಗಳು, ಚುನಾವಣಾ ಪ್ರಸ್ತಾವನೆ, ವಿಧೇಯಕ ಹಿಂಪಡೆಯುವುದು ಸೇರಿದಂತೆ ಹಲವಾರು ಕಾಗದ ಪತ್ರಗಳನ್ನು ಸಭೆಯ ಮುಂದೆ ಮಂಡಿಸಲಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ 2018-19ನೇ ಸಾಲಿನ ಧನವಿನಿಯೋಗ ಮಸೂದೆ, ಹಣಕಾಸು ಲೆಕ್ಕಗಳ ವರದಿಯನ್ನು ಸಭೆಯ ಮುಂದಿಟ್ಟರು. ಮಾರ್ಚ 2019ಕ್ಕೆ ಕೊನೆಗೊಂಡ ವರ್ಷದಲ್ಲಿ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಸಭೆಯ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದರು.